ಮಂಗಳೂರು – 500 ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ಸಾಲ
500ಕ್ಕೂ ಅಧಿಕ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ವ್ಯಕ್ತಿಯೊಬ್ಬ ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘದಿಂದ 2 ಕೋಟಿಗೂ ಅಧಿಕ ಸಾಲ ಪಡೆದ ಘಟನೆ ನಡೆದಿದ್ದು, ಇದೀಗ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು, ಮೋಸ ಮಾಡಿದ್ದಾನೆ. ಹೀಗಾಗಿ, ಅಬೂಬಕ್ಕರ್ ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜ ಸೇವಾ ಸಹಕಾರಿ ಸಂಘ ಜಿಲ್ಲೆಯಲ್ಲಿ ಹಲವು ಶಾಖೆಗಳನ್ನು ಹೊಂದಿದೆ. ಈ ಅವ್ಯವಹಾರದ ಆರೋಪ ಕೇಳಿ ಬಂದಿರುವುದು ಮಂಗಳೂರಿನ ಪಡೀಲ್ನ ಶಾಖೆಯಲ್ಲಿ, ಚಿನ್ನ ಪರೀಕ್ಷೆ ನಡೆಸುವ ಸರಪ, ಬ್ಯಾಂಕ್ನ ಅಧ್ಯಕ್ಷ, ನಿರ್ದೇಶಕರು ಮ್ಯಾನೇಜರ್, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಬ್ಯಾಂಕ್ನ ಸದಸ್ಯರು, ಮಾಜಿ ನಿರ್ದೇಶಕ ಡಿ.ಲೋಕನಾಥ್ ದೂರಿನ ಮೇರೆಗೆ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್ನ ಸರಪ ವಿವೇಕ್ ಆಚಾರ್ಯನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಅಬೂಬಕ್ಕರ್ ಸಿದ್ದಿಕ್ಗಾಗಿ ಹುಡುಕಾಟ ಮುಂದುವರೆದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ನಮ್ಮ ಸಂಘದಲ್ಲಿ ಇಂತಹ ಒಂದು ಘಟನೆ ಆಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಘಟನೆ ಬಗ್ಗೆ ನಾವು ಕಾನೂನು ರೀತಿಯಲ್ಲಿ ಎಲ್ಲಾ ಕ್ರಮಕೈಗೊಂಡಿದ್ದೇವೆ. ಯಾರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕು ಅದನ್ನು ಕೂಡ ನಮ್ಮ ಸಂಘದ ಆಡಳಿತ ಮಂಡಳಿಯ ಸಭೆ ಕರೆದು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ನಡೆಯುವ ಚುನಾವಣೆಯ ದೃಷ್ಟಿಯಿಂದ ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮಗೆ ಪೊಲೀಸರ ಮೇಲೆ ಮತ್ತು ನ್ಯಾಯಾಲಯದ ಮೇಲೆ ಗೌರವ, ನಂಬಿಕೆ ಇದೆ ಎಂದಿದ್ದಾರೆ.