ಮಂಚಿಕೆರೆಯಲ್ಲಿ ಬಾಯ್ಬಿಟ್ಟ ಭೂಮಿ – ಸ್ಥಳೀಯರಲ್ಲಿ ಆತಂಕ; ಸಂಶೋಧನೆಗೆ ಒತ್ತಾಯ
ಉಡುಪಿ: ಮಣಿಪಾಲ ಸಮೀಪದ ಮಂಚಿಕೆರೆ ಎಂಬಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಭೂಮಿ ಬಿರುಕು ಬಿಟ್ಟಿದ್ದು ಏಕೆ? ಎಂಬ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿರುಕು ರಮೇಶ್ ನಾಯಕ್ ಅವರ ಮನೆ ಹಾಗೂ ಬಾವಿಯನ್ನು ಹಾದುಹೋಗಿದ್ದು, ಗೋಡೆ, ಕಿಟಕಿ ಹಾಗೂ ನೆಲಹಾಸಿನಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಪರಿಣಾಮ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ.
2014ರ ಜುಲೈ ತಿಂಗಳಲ್ಲಿ ಈ ಪರಿಸರದಲ್ಲಿ ಭೂಮಿ ಬಿರುಕು ಬಿಟ್ಟಿರುವ ವಿಚಾರ ಸ್ಥಳೀಯ ಗಮನಕ್ಕೆ ಬಂದಿದ್ದು, ಆಗ ಸುಮಾರು ನೂರು ಮೀಟರ್ ಉದ್ದದವರೆಗೆ ಭೂಮಿ ಬಾಯ್ದೆರೆದಿರುವುದು ಕಂಡುಬಂದಿತ್ತು. ಅದೇ ಸಮಯ ದಲ್ಲಿ ಎರಡು ಮೂರು ತಿಂಗಳ ಹಿಂದೆ ಮಂಚಿಕೆರೆಯಿಂದ ಸುಮಾರು ಏಳು ಕಿ.ಮೀ. ದೂರದ ಪರ್ಕಳದಲ್ಲಿ ಕಡು ಬೇಸಿಗೆಯಲ್ಲಿ ನೀರುಕ್ಕಿ ಹರಿದು ತೊರೆ, ಬಾವಿಗಳು ತುಂಬಿದ್ದವು.
ಪರ್ಕಳದ ಅಂತರ್ಜಲದ ಒರೆತಕ್ಕೂ ಮಂಚಿಕೆರೆಯ ಭೂಮಿ ಬಿರುಕಿಗೂ ನಂಟಿರಬಹುದು ಮತ್ತು ಇದು ಭೂಮಿಯೊಳಗೆ ಸಣ್ಣಪ್ರಮಾಣದ ಭೂಕಂಪನ ದಿಂದ ಆಗಿರುವ ಪ್ರಕ್ರಿಯೆ ಎಂಬುದಾಗಿ ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದ ಭೂಗರ್ಭ ತಜ್ಞರ ತಂಡ ಅಭಿಪ್ರಾಯಪಟ್ಟಿತ್ತು.
ಸಂಪೂರ್ಣ ಮುರಕಲ್ಲಿನಿಂದ ಕೂಡಿರುವ ಮಂಚಿಕೆರೆಯ ನಾಲ್ಕು ದಿಕ್ಕು ಗಳಲ್ಲಿಯೂ ಗುಹೆಗಳಿದ್ದು, ಉತ್ತರದಲ್ಲಿ ಪಾಂಡವರ ಗುಹೆ, ಪಶ್ಚಿಮದಲ್ಲಿ ದುಗ್ಗಿ ಪದವು ಗುಹೆ, ಪೂರ್ವದಲ್ಲಿ ಮಣ್ಣಪಳ್ಳ ಗುಹೆ, ದಕ್ಷಿಣದಲ್ಲಿ ಪ್ರಗತಿನಗರ ಗುಹೆಗಳಿವೆ.
ಮಂಚಿಕೆರೆಯಲ್ಲಿನ ರಸ್ತೆ, ಮನೆ ಗೋಡೆ ಗಳಲ್ಲಿ ಬಿಟ್ಟಿರುವ ಬಿರುಕುಗಳು ಹಿರಿದಾಗಿರುವುದನ್ನು ಒಂದು ತಿಂಗಳ ಹಿಂದೆ ಸ್ಥಳೀಯರು ಗಮನಿಸಿದ್ದರು. 2014ರಲ್ಲಿ 2-3 ಅಡಿ ಅಗಲ ಇದ್ದ ಬಿರುಕು ಈಗ 6 ಅಡಿ ಅಗಲವಾಗಿರುವುದು ಕಂಡುಬಂದಿದೆ.
ಈ ಪರಿಸರದಲ್ಲಿ ಸುಮಾರು 200- 250 ಮನೆಗಳಿದ್ದು, ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಈ ಬಿರುಕು ಕಾಣಿಸಿಕೊಂಡಿದೆ. ಬಿರುಕಿನ ಅಗಲ ಮಾತ್ರವಲ್ಲದೆ ಉದ್ದ ಕೂಡ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಂಚಿಕೆರೆ ಕಾಲೋನಿಯ ಡಾಮರು ರಸ್ತೆಯಲ್ಲಿರುವ ಬಿರುಕು ದೊಡ್ಡಾಗಿದ್ದು, ಮಳೆಯ ನೀರು ಹರಿದು ಬಂದು ಈ ಬಿರುಕು ಸೇರುತ್ತಿದೆ.
ಐದು ವರ್ಷಗಳ ಹಿಂದೆ ಈ ಪರಿಸರದ ಹಲವು ಮನೆಗಳ ಗೋಡೆಗಳಲ್ಲಿ ಹಾಗೂ ಬಾವಿಗಳಲ್ಲಿ ಬಿರುಕುಗಳು ಕಂಡುಬಂದಿದ್ದವು. ಆಗ ಶಂಭು ಕುಂದರ್ ಮನೆಯ ಬಾವಿಯಲ್ಲಿ ಬಿರುಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡೀ ಬಾವಿಯನ್ನು ಆ ಸಮಯದಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಇದೀಗ ಮಂಚಿಕೆರೆಯ ರಮೇಶ್ ನಾಯಕ್ ಎಂಬವರ ಮನೆಯ ಹಾಲ್ನ ಗೋಡೆ ಹಾಗೂ ಸಿಟ್ಔಟ್ನಲ್ಲೂ ಬಿರುಕು ಕಾಣಿಸಿಕೊಂಡಿದೆ. ಬಾವಿಯಲ್ಲಿ ಬಿರುಕು ಇನ್ನಷ್ಟು ಹೆಚ್ಚಾಗಿದೆ.
ಕೂಡಲೇ ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಬೇಕು. ಹೆಚ್ಚಿನ ಅನಾಹುತವಾಗದಂತೆ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.