ಮಂಡ್ಯದಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆಗೆ ಸಿದ್ಧತೆ
ಮಂಡ್ಯ: ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆ ವರೆಗೆ ಮಂಡ್ಯ ಪಿಇಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆಯ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿ ಯಾವುದೇ ಅಡಚಣೆ ಆಗದಂತೆ ಯೋಗಾಭ್ಯಾಸಲ್ಲಿ ಪಾಲ್ಗೊಳ್ಳಬೇಕು ಎಂದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಎಸ್.ಪಿ.ಎಸ್.ಎಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎ.ಎಫ.ಐ, ಮಂಡ್ಯ ಶಾಲಾ ಶಿಕ್ಷಣ ಇಲಾಖೆ, ನೆಹರು ಯುವ ಕೇಂದ್ರ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ಯೋಗ ನಿರತ ಸಂಘ ಸಂಸ್ಥೆಗಳ ವತಿಯಿಂದ ಅಂತರಾಷ್ಟ್ರೀಯ ದಿನದಂದು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಮಂಡ್ಯ ಮಿಮ್ಸ್ ವತಿಯಿಂದ ಯೋಗ ದಿನಾಚರಣೆಯ ದಿನದಂದು ಆರೋಗ್ಯ ತಪಾಸಣೆ ಯನ್ನು ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು ಯೋಗ ಮಾಡಿ ಬಂದಂತಹ ಯೋಗ ಪಟುಗಳು ಹಾಗೂ ರಕ್ತದಾನ ಮಾಡಲು ಆಸಕ್ತಿ ಇರುವವರು ರಕ್ತದಾನ ಮಾಡಬಹುದು ಎಂದು ಹೇಳಿದರು. ಆಯುಷ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಯೋಗ ದಿನಾಚರಣೆಯ ಅಂಗವಾಗಿ ಹಲವು ಬಗೆಯ ಸಸಿಗಳಾದ ಕರಿ ಬೇವಿನ ಗಿಡ, ನೆಲ್ಲಿ ಗಿಡ, ಸೀಬೆ ಗಿಡ, ಪರಂಗಿ ಗಿಡ, ನಿಂಬೆ ಗಿಡ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ರಕ್ತದಾನ ಮಾಡಿ ಬಂದಂತಹ ರಕ್ತ ದಾನಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ಸೀತಾ ಲಕ್ಷ್ಮಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ, ಡಿ.ವೈ.ಎಸ್.ಪಿ.ಡಿ.ಆರ್ ರಾಚಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಶಿವರಾಮೇಗೌಡ, ಜಿಲ್ಲಾ ಸಮಾಜ ಇಲಾಖೆ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ ಚೆಲುವಯ್ಯ, ಭಾರತ ಸ್ಕೌಟ್ಸ್ ಅಂಡ್ ಗೈಡ್ ನ ಭಕ್ತವತ್ಸಲ, ಯೋಗ ಶಿಕ್ಷಕರು ಗಳಾದ ಶಂಕರನಾರಾಯಣ ಶಾಸ್ತ್ರೀ, ರವಿ, ಹೆಚ್.ವಿ. ಶಿವರುದ್ರ ಸ್ವಾಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.