Home Mangalorean News Kannada News ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು

ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು

Spread the love

ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು

ಮಂಡ್ಯ: ಕನಗನ ಮರಡಿಯ ವಿಸಿ ನಾಲೆಗೆ ಖಾಸಗಿ ಬಸ್‌ ಮಗುಚಿ 25 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ನಾಲ್ವರು ಮಕ್ಕಳು ಸೇರಿದಂತೆ 25ಕ್ಕೂ ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಪಾಂಡವಪುರದಿಂದ ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌, ವಿ.ಸಿ. ನಾಲೆಗೆ ಬಿದ್ದಿದೆ. ಈಗಾಗಲೇ 20ಕ್ಕೂ ಹೆಚ್ಚು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬಸ್‌ನಲ್ಲಿ 40ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು. ಮೃತಪಟ್ಟವರಲ್ಲಿ 6 ಪುರುಷರು ಹಾಗೂ 11 ಮಹಿಳೆಯರು ಇದ್ದಾರೆ ಎಂದು ತಿಳಿದುಬಂದಿದೆ.

ಕೆಎ19 ಎಫ್ ಎ 5676 ನೋಂದಣಿ ಸಂಖ್ಯೆಯ ಖಾಸಗಿ ಬಸ್‌, ಚಾಲಕನ ನಿಯಂತ್ರಣ ತಪ್ಪಿ, 12 ಅಡಿ ಆಳದ ವಿ.ಸಿ ನಾಲೆಗೆ ಬಿದ್ದಿದೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ.

ಈ ವಿಷಯವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಮಂಡ್ಯಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ, ಚಾಲಕನ ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದರು.

ಈ ನಡುವೆ ದುರಂತದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆಯಬೇಕಾಗಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ.

ಶನಿವಾರ ಆಯೋಜಿಸಲಾಗಿದ್ದ ಜೆಡಿಎಸ್‌ ಶಾಸಕಾಂಗ ಸಭೆಯನ್ನೂ ರದ್ದುಪಡಿಸಲಾಗಿದೆ.

ಮಧ್ಯಾಹ್ನ 12 ಗಂಟೆ ವೇಳೆಗೆ ಘಟನೆ ನಡೆದಿದ್ದು, ಕನಗನ ಮರಡಿ ಗ್ರಾಮದ ಶಾಲೆಯಿಂದ ಮಕ್ಕಳು ಇದೇ ಬಸ್‌ನಲ್ಲಿ ಅರ್ಧ ದಿನದ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದರು.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಪಾಂಡವಪುರದಿಂದ ಮಂಡ್ಯದತ್ತ ಬರುತ್ತಿದ್ದ ಬಸ್‌ನ್ನು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ. ರಸ್ತೆ ಅಗಲವಾಗಿದ್ದರೂ, ಅತಿಯಾದ ವೇಗದಿಂದ ಬಸ್‌ ನಿಯಂತ್ರಣ ಕಳೆದುಕೊಂಡು ನಾಲೆಗೆ ಉರುಳಿದೆ. ಬಸ್‌ನಲ್ಲಿದ್ದ ರೋಹಿತ್‌ ಎಂಬ ಬಾಲಕ ಕಿಟಕಿಯಿಂದ ಬಸ್‌ನಿಂದ ಹೊರಬಂದು ಈಜಿ ದಡ ಸೇರಿದ್ದಾರೆ. ಓಡಿ ಬಂದು ಘಟನೆಯನ್ನು ಸ್ಥಳೀಯರಿಗೆ ಹೇಳಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರಿನಿಂದ 6 ಅಗ್ನಿಶಾಮಕ ವಾಹನಗಳನ್ನು ಕರೆಸಲಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಸ್ತೆ ಅಗಲವಾಗಿದ್ದರೂ ನಾಲೆಯ ಪಕ್ಕದಲ್ಲೇ ಬಸ್‌ ಚಲಿಸುತ್ತಿತ್ತು.

ಘಟನೆ ಬಗ್ಗೆ ಸಿಎಂ ಕುಮಾರಸ್ವಾಮಿ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದ್ದು, ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ನಡೆಯಬೇಕಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ.

ಘಟನೆ ಕುರಿತು ಗೃಹ ಸಚಿವ ಪರಮೇಶ್ವರ ಮಾತನಾಡಿದ್ದು, ಈ ವರೆಗೆ 25 ಮಂದಿಯ ಶವ ಹೊರಕ್ಕೆ ತೆಗೆಯಲಾಗಿದೆ. ಪ್ರಾರ್ಥಮಿಕ ವರದಿ ಪ್ರಕಾರ ಚಾಲಕನ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದು ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


Spread the love

Exit mobile version