ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸಿ: ಹೇಮಾವತಿ ವಿ. ಹೆಗ್ಗಡೆ
ಉಜಿರೆ: ಮಕ್ಕಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲಾ ಪಠ್ಯದಲ್ಲಿ ಕಲಿತ ವಿಜ್ಞಾನ ಮತ್ತು ತಂತ್ರಜ್ಷಾನವನ್ನು ತಮ್ಮ ದೈನಂದಿನ ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಮತ್ತು ರಕ್ಷಕರು ಮಕ್ಕಳಲ್ಲಿ ಸ್ವಚ್ಛತೆ ಬಗ್ಯೆ ಅರಿವು, ಜಾಗೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.
ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಜಂಟಿ ಆಶ್ರಯದಲ್ಲಿ ಬುಧವಾರ ಧರ್ಮಸ್ಥಳದಲ್ಲಿ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ 24ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಜೀವನ ಸುಲಭ ಹಾಗೂ ಸುಖಮಯವಾಗುತ್ತದೆ. ಆದರೆ ಒಳಿತುಗಳ ಜೊತೆಗೆ ಕೆಡುಕುಗಳ ಬಗ್ಯೆಯೂ ನಾವು ಚಿಂತನೆ ಮಾಡಬೇಕು. ಪರಿಸರ ಮಾಲಿನ್ಯದಿಂದಾಗಿ ಭೂಮಿಯ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ, ಜಲಕ್ಷಾಮ, ಒಝೋನ್ ಪದರದಲ್ಲಿ ರಂಧ್ರ, ವಾಯುಮಾಲಿನ್ಯ, ಪ್ರಾಕೃತಿಕ ವಿಕೋಪಗಳು ಮೊದಲಾದ ಸಮಸೆಗಳನ್ನು ಎದುರಿಸಬೇಕಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ವಾಯು ಮಾಲಿನ್ಯದ ವಿಶ್ವರೂಪ ದರ್ಶನವಾಗಿದೆ. ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆಯಿಂದ ಆಹಾರ, ತರಕಾರಿ, ಹಣ್ಣು – ಹಂಪಲು, ಹಾಲು, ನೀರು ಕೂಡಾ ಹಾನಿಕಾರಕವಾಗಿದೆ. ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಿಗೆ ಸ್ವಚ್ಛತೆ, ಪರಿಸರ ಪ್ರಜ್ಞೆ, ಪೌಷ್ಠಿಕ ಆಹಾರದ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿ’ಮೆಲ್ಲೊ ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕು. ಮಕ್ಕಳಲ್ಲಿ ಧನಾತ್ಮಕ ಪರಿವಬರ್ತನೆ ಆದಾಗ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಕಡಮಜಲು ಸುಭಾಷ್ ರೈ ಸ್ವಾಗತಿಸಿದರು. ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಪರಿಮಳ, ಎಮ್. ವಿ. ಧನ್ಯವಾದವಿತ್ತರು. ಆಶಾ ಸುಜಿತ್ ಕಾರ್ಯಕ್ರಮ ನಿರ್ವಹಿಸಿದರು.