ಮಕ್ಕಳಿಗೆ ಶಿಕ್ಷಣ ನೀಡಿದರೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ :ಜಿಲ್ಲಾ ಪಂಚಾಯತ್ ಸಿಇಓ – ಡಾ. ಆನಂದ್ ಕೆ. 

Spread the love

ಮಕ್ಕಳಿಗೆ ಶಿಕ್ಷಣ ನೀಡಿದರೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ :ಜಿಲ್ಲಾ ಪಂಚಾಯತ್ ಸಿಇಓ – ಡಾ. ಆನಂದ್ ಕೆ. 

ಮಂಗಳೂರು:  ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲೆ ಇದೆ. ಇದರಿಂದ ಮಕ್ಕಳು ಬಾಲಕಾರ್ಮಿಕರಾಗುವುದನ್ನು ತಪ್ಪಿಸಿ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಅವಕಾಶ ಸಿಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ಆನಂದ್ ಕೆ. ಅವರು ಹೇಳಿದರು

ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಪೆÇೀಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಂಗಳೂರು ವಕೀಲರ ಸಂಘ ಮತ್ತು ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅವರು ಬಡತನದಲ್ಲೇ ಮುಂದುವರಿದು ಭವಿಷ್ಯದಲ್ಲಿ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಶಿಕ್ಷಿತರು ಸರಕಾರದ ನಿಯಮ ಕಾನೂನುಗಳನ್ನು ಅರಿತುಕೊಳ್ಳುವುದರಿಂದ ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಮಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಪಾಟೀಲ ವೀರನಗೌಡ ಎಸ್. ಅವರು ಮಾತನಾಡಿ, ಬಾಲಕಾರ್ಮಿಕರನ್ನು ದುಡಿಸುವ ಅವರ ಪಾಲಕರು ಕೂಡ ಶಿಕ್ಷಾರ್ಹರಾಗಿರುತ್ತಾರೆ. ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಸಿ ಅವರ ಭವಿಷ್ಯವನ್ನು ಹಿಚುಕುವುದು ಕಳವಳಕಾರಿಯಾಗಿದೆ ಎಂದರು.

ಉಪಕಾರ್ಮಿಕ ಆಯುಕ್ತ ಸೋಮಣ್ಣ ಅವರು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮಾರಂಭದಲ್ಲಿ ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳಿಂದ ವಿವಿಧ ಕಾರ್ಯಕ್ರಮ ನಡೆಯಿತು. ಸಹಾಯಕ ಕಾರ್ಮಿಕ ಆಯುಕ್ತರಾದ ಶಿವಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೆಂಕಟೇಶ್ ಎಸ್. ಪಟಗಾರ್, ಕಾರ್ಮಿಕ ಅಧಿಕಾರಿಗಳಾದ ಕಾವೇರಿ ಟಿ., ವಿಲ್ಮಾ ಎಲಿಜಬೆತ್ ತೌವ್ರೋ, ಮೇರಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿ’ಸೋಜಾ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‍ನ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಜಂಟಿ ಕೈಗಾರಿಕೆ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.


Spread the love