ಮಕ್ಕಳು ತಂದೆ- ತಾಯಂದಿರ ಆಸೆ, ಕನಸುಗಳನ್ನು ಈಡೇರಿಸುವಂತಹ ಯಂತ್ರಗಳಲ್ಲ – ಡಾ. ರಾಜಶೇಖರ್
ಕುಂದಾಪುರ: ಯುವ ಸಮುದಾಯವನ್ನು ಯಂತ್ರ ಎಂದು ಭಾವಿಸಿಕೊಂಡು ನಮ್ಮ ಕನಸು, ಆಸೆಗಳನ್ನು ಈಡೇರಿಸಲು ಮಾನಸಿಕ ಒತ್ತಡದಲ್ಲಿ ಮುಳುಗಿಸುತ್ತಿರುವುದು ದುರಂತ. ಮಕ್ಕಳು ತಂದೆ- ತಾಯಂದಿರ ಆಸೆ, ಕನಸುಗಳನ್ನು ಈಡೇರಿಸುವಂತಹ ಯಂತ್ರಗಳಲ್ಲ ಎಂದು ಉಜಿರೆ ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 18ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಅಂಕಗಳ ಹಿಂದೆ ಓಡುವುದನ್ನು ರೂಢಿ ಮಾಡಿಸುತ್ತಿದ್ದು, ಇಂತಹ ಒತ್ತಡದಿಂದಲೇ ಎಳೆಯ ಪ್ರಾಯದಲ್ಲೇ ಖಿನ್ನತೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಹಿರಿಯರು ಆತ್ಮಾವಲೋಕನ ಮಾಡಬೇಕು. ಮೊಬೈಲ್ ಎನ್ನುವ ಯಂತ್ರ ನಮ್ಮೆಲ್ಲರನ್ನೂ ಯಂತ್ರವನ್ನಾಗಿಸುತ್ತಿದ್ದು, ನಾವು ಜಾಗರೂಕತೆ ವಹಿಸಿ, ಯುವ ಸಮೂಹಕ್ಕೆ ಮಾದರಿಯಾಗಬೇಕಿದೆ. ಜ್ಞಾನದ ಜೊತೆ ಜೊತೆಯಲ್ಲಿ ಜೀವನ ಮೌಲ್ಯ, ದೇಶದ ಸಂಸ್ಕೃತಿ, ಪರಂಪರೆ, ಸನ್ನಡತೆ, ಮಾನವೀಯತೆಯನ್ನು ಬೆಳೆಸುವ ಶಿಕ್ಷಣ ಅತ್ಯಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ನ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಬ್ರಿಟಿಷ್ ಸರಕಾರವು ನೂರು ವರ್ಷಗಳ ಹಿಂದೆ ಮೆಕಾಲೆ ನೇತೃತ್ವದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಸ್ಥಿರಗೊಳಿಸಿದ್ದು, ಅದನ್ನು ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣಗಳು ಹಲವಾರು ಇರಬಹುದು ಎಂದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ನ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ, ಉಪಸ್ಥಿತರಿದ್ದರು.
ಪ.ಪೂ. ಕಾಲೇಜಿನ ಪ್ರಾಂಶುಪಾಲ ಅವಿನಾಶ್, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ. ವರದಿ ವಾಚಿಸಿದರು. ಹರ್ಷಿತಾ ಶೇಟ್ ಸ್ವಾಗತಿಸಿ, ಧವಳ್ ಎಸ್. ಶೆಟ್ಟಿ ವಂದಿಸಿದರು. ಫ್ರೆನಿಟಾ ಡಿಕೋಸ್ಟಾ ಪರಿಚಯಿಸಿ, ಸುಷ್ಮಾ ಎಸ್. ವಿಜೇತರ ಪಟ್ಟಿ ವಾಚಿಸಿದರು. ಶ್ರೀಮಾನ್ ನಿರೂಪಿಸಿದರು