ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಕಾಪಾಡುವಲ್ಲಿ ಹೆತ್ತವರ ಪಾತ್ರ ಮಹತ್ವದ್ದು – ಎಸ್.ಪರಶಿವ ಮೂರ್ತಿ
ಮಂಗಳೂರು : ಚೈಲ್ಡ್ಲೈನ್-1098 ಕುರಿತು ಜನ ಜಾಗೃತಿ ಮೂಡಿಸುವರೇ “ತೆರೆದ ಮನೆ” ಎಂಬ ಕಾರ್ಯಕ್ರಮ ಮಂಗಳೂರು ತಾಲೂಕು ಬಜಪೆ, ತೆಂಕ ಎಕ್ಕಾರು ಭಟ್ರಕೆರೆ ದ.ಕ.ಜಿ.ಪಂ. ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಚೈಲ್ಡ್ಲೈನ್ನ ಭಿತ್ತಿ ಪತ್ರವನ್ನು ಪ್ರದರ್ಶಿಸಿ ಉದ್ಘಾಟಿಸಲಾಯಿತು,
ಕಾರ್ಯಕ್ರಮದಲ್ಲಿ, ಸಾಮಾಜಿಕ ಜಾಲತಾಣ, ಸ್ಮಾರ್ಟ್ ಪೋನ್ಗಳನ್ನು ಲೀಲಾಜಾಲವಾಗಿ ಬಳಸುವುದನ್ನು ತಮ್ಮ ಮಕ್ಕಳ ಹೆಚ್ಚುಗಾರಿಕೆ ಎಂದು ತಿಳಿದು, ಹೆಮ್ಮೆ ಪಡುವ ಬದಲು ಅದರಿಂದ ಮಕ್ಕಳು ದಾರಿತಪ್ಪುತ್ತಿರುವ ಕಡೆಗೆ ಹೆತ್ತವರು ಗಮನಹರಿಸಬೇಕು, ಮಕ್ಕಳಿಗೆ ಮೊಬೈಲ್ ಪೋನ್ ತೆಗೆದುಕೊಡುವ ಮುಂಚೆ ಅದರ ಅಗತ್ಯತೆಯನ್ನು ಅರಿತುಕೊಳ್ಳಬೇಕು, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ತಿಳುವಳಿಕೆ ನೀಡಬೇಕು, ಹೆತ್ತವರು ಮಕ್ಕಳ ಬಗ್ಗೆ ನಿಗಾವಹಿಸಿ, ಗಾಂಜಾ, ಮಾದಕ ವಸ್ತು, ದುಶ್ಚಟಗಳಿಗೆ ಬಲಿಯಾಗದಂತೆ ಕಾಪಾಡಬೇಕು, ಮಕ್ಕಳ ಹವ್ಯಾಸ ಮತ್ತು ನಡವಳಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದಾಗ ನಿರ್ಲಕ್ಷಿಸದೇ ಸೂಕ್ಷ್ಮವಾಗಿ ಗಮನ ಹರಿಸಿ ಆಪ್ತಸಮಾಲೋಚನೆ ನಡೆಸಬೇಕು, ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಹೆತ್ತವರ ಪಾತ್ರ ಮಹತ್ವದ್ದಾಗಿದೆ ಎಂದು ಬಜಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವ ಮೂರ್ತಿ ಹೇಳಿದರು.
ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಪೋಷಕತ್ವ ಸಹಾಯ ಧನ, ಮಗು ದತ್ತು ಪಡೆಯುವ ಬಗ್ಗೆ, ಬಾಲ ನ್ಯಾಯ ಕಾಯಿದೆ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಮಾ.ಕೆ.ಎಲ್ ಮಾಹಿತಿಯನ್ನು ನೀಡಿದರು.
ಸಮಾಜ ಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆ ಜನರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುತ್ತದೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಯಾವುದೇ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಮಹಿಳಾ ಅಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳಬಹುದು ಎಂದು ಬಜಪೆ ಪೊಲೀಸ್ ಠಾಣೆಯ ಸಹಾಯಕ ಮಕ್ಕಳ ಕಲ್ಯಾಣಾಧಿಕಾರಿ ಲಾವಣಿ ತಿಳಿಸಿದರು.
ಗರ್ಭಿಣಿ, ಬಾಣಂತಿ ಆರೈಕೆ ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಸ್ತನ್ಯಪಾನ, ಪೌಷ್ಠಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿ, ಚುಚ್ಚು ಮದ್ದು, ಮಕ್ಕಳಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆ, ರೋಗ ಲಕ್ಷಣಗಳನ್ನು ವಿವರಿಸಿ, ಮಕ್ಕಳ ಪಾಲನೆ ಪೋಷಣೆಯಲ್ಲಿ ಮುಂಜಾಗೃತೆ ವಹಿಸುವಂತೆ ತಿಳಿಸಿ, ಆರೋಗ್ಯ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳ ಕುರಿತು ಆರೋಗ್ಯ ಇಲಾಖೆಯ ಜೂಲಿಯಾನ ಡಿ’ಸೋಜ ಮಾಹಿತಿಯನ್ನು ನೀಡಿದರು.
ಚೈಲ್ಡ್ಲೈನ್-1098 ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು ಪ್ರಸ್ತಾವಿಕವಾಗಿ ಮಾತನ್ನಾಡಿ, ಚೈಲ್ಡ್ಲೈನ್ನ-1098ನ ರೇವತಿ ಹೊಸಬೆಟ್ಟು ಗುಂಪು ಚರ್ಚೆಯನ್ನು ನಡೆಸಿದರು, ಕಾರ್ಯಕ್ರಮವನ್ನು ಮಕ್ಕಳ ಸಹಾಯವಾಣಿಯ ನಾಗರಾಜ್ ಪಣಕಜೆ ನಿರೂಪಿಸಿ, ಮುಖ್ಯೋಪಧ್ಯಾಯರಾದ ಕೋಮಲ.ಎಂ.ಕೆ ಸ್ವಾಗತಿಸಿ, ಚೈಲ್ಡ್ಲೈನ್ನ-1098ನ ಕೀರ್ತೀಶ್ ಕಲ್ಮಕಾರು ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಮೀರಾ, ಮುಖ್ಯ ಶಿಕ್ಷಕಿ ಕೋಮಲ.ಎಂ.ಕೆ, ಅಂಗನವಾಡಿ ಶಿಕ್ಷಕಿ ಸಾವಿತ್ರಿ, ಚೈಲ್ಡ್ಲೈನ್ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಬಜಪೆ ಪೊಲೀಸ್ ಠಾಣೆಯ ರಕ್ಷಿತಾ, ಹೇಮನಾಥ್ ಕುಮಾರ್ ಮತ್ತು ಗಿರೀಶ್.ಯು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರುಗಳು, ವಿಧ್ಯಾರ್ಥಿಗಳು, ಪೋಷಕರು, ಆಶಾ ಕಾರ್ಯಕರ್ತರುಗಳು, ಸ್ತೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಸಾರ್ವಜನಿಕರು ಭಾಗವಹಿಸಿರುತ್ತಾರೆ.