ಮಕ್ಕಳೊಂದಿಗೆ ಮಗುವಿನಂತೆ ಕೆಸರಿನಲ್ಲಾಡಿದ ಮಗು ಮನದ ಜಿಲ್ಲಾಧಿಕಾರಿ ಮುಲೈ ಮುಗಿಲನ್
ಬಂಟ್ವಾಳ: “ರೈತ ದೇಶದ ಬೆನ್ನೆಲುಬು. ಸಂತೋಷದೊಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು. ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ಆತನು ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ” ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.
ಅವರು ಸಪ್ಟಂಬರ್ 22ರಂದು ರವಿವಾರ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ.) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6ನೇ ವರ್ಷದ “ಕಸರ್ದ ಕಂಡೊಡು ಕುಸಲ ಗೊಬ್ಬುಲು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಧಿಕಾರದ ಯಾವುದೇ ಬಿಗುಮಾನವನ್ನು ಇಡದೆ ಮಕ್ಕಳ ಜೊತೆ ಮಗುವಾಗಿ ಬೆರೆತು ಕೆಸರಿನಲ್ಲಿ ಸಂಭ್ರಮಿಸಿದರು. ಮಳೆಗಾಗಿ ರಜೆ ನೀಡುವ ಬಗ್ಗೆ ಸ್ನೇಹಿತನಂತೆ ಮಕ್ಕಳ ಜೊತೆ ವರ್ತಿಸಿದ್ದ ಜಿಲ್ಲಾಧಿಕಾರಿ ಕೆಸರಿನಲ್ಲೂ ಮಕ್ಕಳ ಜೊತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು.