ಮಕ್ಕಳ ಕವಿಗೋಷ್ಠಿ: ನಾಳೆಗೊಂದು ವಿಶ್ವಾಸಯುತ ಕವಿಪರಂಪರೆ
“ರವಿ ಕಾಣದನ್ನು ಕವಿಕಂಡ” ಎಂಬ ಮಾತಿದೆ. ನಮ್ಮ ಭಾವನೆಗಳು, ಕಲ್ಪನೆಗಳನ್ನು ಪದಪುಂಜಗಳ ಅರ್ಥಗರ್ಭಿತ ಜೋಡಣೆಯ ಮೂಲಕ ಲಿಖಿತ ಸ್ವರೂಪ ಕೊಟ್ಟು ಚೆಂದಗಾಣಿಸುವ ಅದ್ಭುತ ಶಕ್ತಿ ಕವಿಯದ್ದು. ಒಂದು ವಿಷಯವನ್ನು ನಾವು ಊಹಿಸಲೂ ಸಾಧ್ಯವಿರದ ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸಾಮಥ್ರ್ಯ ಕವಿಗಿದೆ. ಯಾವುದೇ ಘಟನೆಯನ್ನು ಕೇವಲ ಮೇಲ್ನೋಟಕ್ಕೆ ನಿರ್ಧರಿಸದೆ ಅಥವಾ ಗ್ರಹಿಸದೇ ಅದರೊಳಹನ್ನು ಅನುಭವಿಸಿ ಪರಿಭಾವಿಸಿದಾಗಷ್ಟೇ ಆ ಕಾವ್ಯ ಯಶಸ್ವಿ ಎಂದೆನಿಸಿಕೊಳ್ಳುತ್ತದೆ ಮತ್ತು ಇದನ್ನು ಲೇಖನಿಯ ಮೂಲಕ ಹೊರಗಿಟ್ಟು ಪರಿಚಯಿಸಿಕೊಡುವವನೇ ಒಬ್ಬ ಸಮರ್ಥ ಕವಿ. ಹೇಳುವ ವಿಷಯವನ್ನೇ ಕಾವ್ಯಾತ್ಮಕವಾಗಿ ಹೇಳಿ ಅದರ ಸೌಂದರ್ಯ ಹೆಚ್ಚಿಸುವುದು ಕವನಕ್ಕಿರುವ ವ್ಯಾಪ್ತಿಯನ್ನು ತಿಳಿಸುತ್ತದೆ. ಕನ್ನಡ ಭಾಷೆಯ ಶಬ್ದಭಂಡಾರವಂತೂ ಅಪರಿಮಿತ ಸೌಂದರ್ಯಯುತ ಹಾಗೂ ಸಮೃಧ್ಧ. ಅಂದಿನ ಪಂಪ,ರನ್ನ,ಜನ್ನ ರಿಂದ ಹಿಡಿದು ಇಂದಿನ ಜಯಂತ ಕಾಯ್ಕಿಣಿ, ಜೋಗಿಯ ವರೆಗೆ ಕನ್ನಡ ಕಾವ್ಯ ಲೋಕದ ಬೆಳವಣಿಗೆಯ ಹಂತವು ಗಮನಾರ್ಹ. ಹೀಗಿರುವಾಗ ಕವಿ ಪರಂಪರೆಯನ್ನು ನೆನಪಿಸಿ, ಉಳಿಸಿ ಬೆಳೆಸುವ ಪ್ರಯತ್ನ ಕವಿ ಗೋಷ್ಠಿಗಳದ್ದು. ಇಂಥದ್ದೇ ಒಂದು ಪ್ರಯತ್ನ ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆಯಿತು. ಸಾಮಾನ್ಯವಾಗಿ ಪ್ರಬುದ್ಧ ಕವಿಗಳು, ಅನುಭವಿಗಳು, ಜನ ಮನ್ನಣೆಗಳಿಸಿ ಪ್ರಚಲಿತದಲ್ಲಿರುವವರು ಕವಿಗೋಷ್ಠಿಗಳಲ್ಲಿ ಭಾಗವಹಿಸುವುದನ್ನು ನಾವು ನೋಡಿದ್ದೇವೆ ಆದರೆ ಇಲ್ಲಿನ ವಿಶೇಷತೆಯೆಂದರೆ ಈ ಕವಿಗೋಷ್ಠಿಯಲ್ಲಿ ಪಾಲ್ಗೊಂಡವರೆಲ್ಲರೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನ ಮಹತ್ತರ ಕಾರ್ಯಕ್ರಮಗಳಲ್ಲೊಂದಾದ “ಆಳ್ವಾಸ್ ನುಡಿಸಿರಿ 2017” ರ ಅಂಗವಾಗಿ ಕೈಗೊಂಡ ವಿದ್ಯಾರ್ಥಿಸಿರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕರಾವಳಿಯ ಹತ್ತು ಹಲವು ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿ ಕವಿವರ್ಯರು ಸ್ವರಚಿತ ಕಾವ್ಯಗಳನ್ನು ವಾಚಿಸಿ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಈ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಸನ್ನಿಧಿ ಟಿ ರೈ ಪೆರ್ಲ ಆ ಸ್ಥಾನಕ್ಕೆ ಸೂಕ್ತ ಪ್ರತಿಭೆ. ಕಾಸರಗೋಡಿನ ಚಿನ್ಮಯ ವಿದ್ಯಾಲಯದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸನ್ನಿಧಿ ತಮ್ಮ ಮಾತುಗಳು ಹಾಗೂ ಕಾವ್ಯದಿಂದ ನೆರೆದ ಸಮಸ್ತರನ್ನೂ ನಿಬ್ಬೆರಗಾಗಿಸಿದರು. ಮಕ್ಕಳ ಸಾಹಿತ್ಯದ ಕುರಿತು ವಿಶೇಷ ನಿಲುವುಗಳನ್ನು ಹೊಂದಿರುವ ಸನ್ನಿಧಿ ಕನ್ನಡ ಕಾವ್ಯಲೋಕಕ್ಕೊಂದು ಆಶಾಕಿರಣ.
“ಮಕ್ಕಳ ಸಾಹಿತ್ಯ ಎಂದರೆ ಬರೀ ಶಿಶುಗೀತೆಗಳೆಂದೋ ಅಥವಾ ಬಾಲಿಶ ಎನ್ನುವ ಮೂಢನಂಬಿಕೆಯೊಂದಿದೆ, ಮಕ್ಕಳ ಸಾಹಿತ್ಯವೇ ಬೇರೆ ಮಕ್ಕಳಿಗಾಗಿ ರಚಿತವಾದ ಸಾಹಿತ್ಯವೇ ಬೇರೆ, ಮಕ್ಕಳಸಾಹಿತ್ಯವನ್ನು ಬಾಲಿಶ ಎಂದು ಅಲ್ಲಗಳೆದರೆ ಅಂಥಹಾ ಮೌಢ್ಯತೆ ಮತ್ತೊಂದಿಲ್ಲ” ಎಂದು ಹೇಳುವಾಗ ಆಕೆಯ ಧಾಟಿಯಲ್ಲಿದ್ದ ಧೃಡತೆ ಶ್ಲಾಘನೀಯ. ಮುಂದೆ ಸರತಿ ಸಾಲಿನಲ್ಲಿ ಅಣಿಮುತ್ತುಗಳಂತೆ ಬಂದ; ಝೇಂಕಾರ ಕವನ ಸಂಕಲನದ ಕರ್ತೃ ಜಿತಿನ್ ಜೋನಿ ತಮ್ಮ “ಬೆಳಕು” ಕವಿತಯ ಮೂಲಕ ತಮ್ಮ ಅಪ್ರತಿಮ ಕಾವ್ಯಾತ್ಮಕ ಶಕ್ತಿಯನ್ನು ಸಾದರಪಡಿಸಿದರೆ, “ಇರುವೆ” ಕವನ ಸಂಕಲನದ ರುವಾರಿ ಅರ್ಜುನ್ ಎಸ್ ಎಮ್ ತಮ್ಮ “ಪೂರ್ಣ ಚಂದ್ರ ತೇಜಸ್ವಿ” ಕವನದ ಮೂಲಕ ತನ್ನ ನೆಚ್ಚಿನ ಕವಿಗೆ ಕಾವ್ಯನಮನ ಸಲ್ಲಿಸಿದರು. ಸುರವಿ ಎಸ್ ಯು “ನಾ ಕಾಣೆ ದೇವರನ್ನ” ಕವಿತೆಯ ಮೂಲಕ ತನ್ನ ನಾಸ್ತಿಕ ನಿಲುವನ್ನು ಮಂಡಿಸಿದರೆ, ಆರ್ ಕೆ ಅನುಪ್ರಿಯ “ಮಾತೆಯ ಮಡಿಲಲ್ಲಿ” ಕಾವ್ಯದ ಮೂಲಕ ದೇಶಭಕ್ತಿಯ ರಸಸ್ವಾದದ ಅನುಭವ ಮಾಡಿಕೊಟ್ಟರು. ಚೈತ್ರರ “ಜಲ”, ಪ್ರಜ್ಞಾ ಎಂ ಆರ್ ರ ” ಪ್ರಕೃತಿ ಮಡಿಲು” ಹಾಗು “ಸೋಲುತಿರುವೆ-ಸಾಯುತಿರುವೆ”, ಜೀವಿತ ಅವರ “ಸಾಹಿತ್ಯ ಸಮ್ಮೇಳನದ ಪರಿಸರ” ಈ ಕವನಗಳು ಸಭಿಕರನ್ನು ಕಾವ್ಯಮಯ ಲೋಕಕ್ಕೆ ಎಳೆದೊಯ್ದವು.
ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಜರುಗಿದ ಈ ಕವಿಗೋಷ್ಠಿಯು ಯಾವ ಸಾಹಿತ್ಯ ಸಮಾವೇಶಕ್ಕೂ ಕಡಿಮೆಯಿರಲಿಲ್ಲ ಎನ್ನುವುದರಲ್ಲಿ ಉತ್ಪ್ರೇಕ್ಷೆಯೇ ಇಲ್ಲ. ಮಕ್ಕಳಿಂದ ಹಾಗೂ ಮಕ್ಕಳಿಗಾಗಿ ನಡೆದ ಈ ಕವಿಗೋಷ್ಠಿಯು ನೆರೆದಿದ್ದ ಸಾಹಿತ್ಯಾಭಿಮಾನಿಗಳನ್ನು ರಸದಕಡಲಿನಲ್ಲಿ ತೇಲಿಸಿದ್ದಂತೂ ನಿಜ.
ಸಾಮಾಜಿಕ ಜಾಲತಾಣವನ್ನು ಅರಿತು ಬಳಸಿ
ಮೂಡಬಿದಿರೆ: ಸಾಮಾಜಿಕ ಜಾಲತಾಣದ ಬಗೆಗಿನ ಚರ್ಚೆಗಳು ಇಂದು ನಿನ್ನೆಯದಲ್ಲ. ಹಾಗಾಗಿ ಇಂತಹ ಗಂಭೀರ ವಿಷಯಗಳ ಚರ್ಚೆಗೂ ವಿದ್ಯಾರ್ಥಿಸಿರಿ ವೇದಿಕೆಯಾಯಿತು. ಪಣಂಬೂರಿನ ಎನ್.ಎಂ.ಪಿ.ಓ ಶಾಲೆ ಯ ವಿದ್ಯಾರ್ಥಿನಿ ಭೂಮಿಕಾ ಪ್ರಿಯದರ್ಶಿನಿ “ಸಾಮಾಜಿಕ ಜಾಲತಾಣಗಳು:ಅರಿತು ಬಳಸಿದರೆ ಚೆನ್ನ” ವಿಷಯದ ಕುರಿತು ಉಪನ್ಯಾಸ ನೀಡಿದರು.
“ತಂತ್ರಜ್ಞಾನ ಎಂಬುದು ಎರಡು ಅಲಗಿನ ಕತ್ತಿ ಇದ್ದ ಹಾಗೆ, ಅದು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನೂ ಒಳಗೊಂಡಿರುತ್ತದೆ. ಅದನ್ನು ಅರಿತು ಬಳಸುವುದು ನಮ್ಮ ಜವಾಬ್ದಾರಿ’ ಎಂದು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿನಿ ಭೂಮಿಕಾ ಪ್ರಿಯದರ್ಶಿನಿ ತಿಳಿಸಿದರು.
“ಸಾಮಾಜಿಕ ಜಾಲತಾಣಗಳು ಇಂದು ಯುವಜನತೆಯಲ್ಲಿ ವ್ಯಸನವಾಗಿ ರೂಪುಗೊಳ್ಳುತ್ತಿದೆ. ಅನೈತಿಕ, ಅಶ್ಲೀಲ ವಿಷಯಗಳು ಸುಲಭವಾಗಿ ಜಾಲತಾಣಗಳಲ್ಲಿ ದೊರೆಯುತ್ತಿರುವುದರಿಂದ, ಮಕ್ಕಳು ಹೆಚ್ಚಾಗಿ ಅವುಗಳಿಗೆ ಬಲಿಯಾಗುತ್ತಿದ್ದಾರೆ. ‘ಬ್ಲೂ ವೇಲ್’ನಂತಹ ಆಟಗಳು ಸಾಮಾಜಿಕ ಮಾಧ್ಯಮದ ದುರ್ಬಳಕೆಗೆ ಜ್ವಲಂತ ಸಮಸ್ಯೆಗಳಾಗಿ ನಿಲ್ಲುತ್ತಿವೆ. ದೇಶ ಕಟ್ಟಬೇಕಾದ ಯುವಜನತೆ ಇಂದು ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮೈಮರೆಯುತ್ತಿದ್ದಾರೆ” ಎಂದರು.
ಮುಂದೆ ಸಾಮಾಜಿಕ ಜಾಲತಾಣದ ಸಕಾರಾತ್ಮಕ ಆಯಾಮದ ಮೇಲೆ ಬೆಳಕು ಚೆಲ್ಲಿದ ಅವರು, “ಸಾಮಾಜಿಕ ಜಾಲತಾಣವೆಂದರೆ ಕೇವಲ ವಾಟ್ಸಾಪ್, ಫೇಸ್‍ಬುಕ್ ಇತ್ಯಾದಿ ಎಂಬ ಮನೋಭಾವ ತೊರೆದು, ಅದರ ಉಪಯೋಗಗಳ ಕಡೆಗೆ ಗಮನ ಹರಿಸಬೇಕಿದೆ. ಜಾಲತಾಣಗಳು ಜಗತ್ತಿನ ಯಾವುದೇ ವಿಷಯದ ಕುರಿತು ಮಾಹಿತಿ ಪಡೆದುಕೊಳ್ಳಲು ಉತ್ತಮ ಮಾಧ್ಯಮ. ನಮ್ಮ ಪರೀಕ್ಷಾ ತಯಾರಿಕೆಗೆ, ತಜ್ಞರ ಜೊತೆ ಸಂವಹನಿಸುವುದಕ್ಕೆ, ನಮ್ಮ ಇತರ ನೆಚ್ಚಿನ ವಿಷಯಗಳ ಬಗೆಗೆ ಮಾಹಿತಿ ಪಡೆಯಲು ಬಳಸಬಹುದಾಗಿದೆ. ಇದನ್ನು ಅರಿಯಬೇಕಾದ ಅನಿವಾರ್ಯತೆ ಇಂದಿನ ಯುವಜನತೆಗೆ ಇದೆ” ಎಂದು ಹೇಳಿದರು.
“ಜಾಲತಾಣಗಳಲ್ಲಿ ಮುಳುಗಿ ಹೋಗಿ ನಮ್ಮ ಸಂಬಂಧಗಳನ್ನು ಮರೆಯುತ್ತಿರುವುದು ವಿಪರ್ಯಾಸವಾದರೂ ಸತ್ಯ. ಸಾಮಾಜಿಕ ಜಾಲತಾಣ ಕೇವಲ ಮಾಹಿತಿ ನೀಡುತ್ತದೆ ಆದರೆ ವಿದ್ಯೆಯನ್ನಲ್ಲ. ಹಾಗಾಗಿ ಇದರ ನಡುವೆ ಸಂಬಂಧಗಳನ್ನು ಮರೆಯುವಂತಾಗಬಾರದು. ಅದರ ಕುರಿತಾಗಿರುವ ತಪ್ಪು ಕಲ್ಪನೆ ತೊರೆಯಬೇಕು” ಎಂದು ಉಪಸಂಹಾರದಲ್ಲಿ ವಿಮರ್ಶಿಸಿದರು.
ಮೂಡಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶರಣ್ಯ ಉಪನ್ಯಾಸ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು.