ಮಕ್ಕಳ ಪಾಲನಾ ಕೇಂದ್ರಗಳ ಸಮಗ್ರ ವಿವರ ಸಂಗ್ರಹಿಸಲು ಡಿಸಿ ಸಿಂಧು ಬಿ ರೂಪೇಶ್ ಸೂಚನೆ 

Spread the love

ಮಕ್ಕಳ ಪಾಲನಾ ಕೇಂದ್ರಗಳ ಸಮಗ್ರ ವಿವರ ಸಂಗ್ರಹಿಸಲು ಡಿಸಿ ಸಿಂಧು ಬಿ ರೂಪೇಶ್ ಸೂಚನೆ 

ಮಂಗಳೂರು: ಜಿಲ್ಲೆಯಲ್ಲಿರುವ ಅನಾಥಾಲಯ, ನಿರ್ಗತಿಕರ ಮಂದಿರ ಸೇರಿದಂತೆ ಮಕ್ಕಳಿಗೆ ಆಶ್ರಯ ನೀಡುತ್ತಿರುವ ಎಲ್ಲ ಕೇಂದ್ರಗಳ ಸಮಗ್ರ ವಿವರ ಸಂಗ್ರಹಿಸಲು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಸೂಚಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‍ಹಾಲ್‍ನಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ಮಕ್ಕಳ ಪಾಲನಾ ಸಂಸ್ಥೆಗಳ ಜಿಲ್ಲಾ ತನಿಖಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಪಾಲನಾ ಕೇಂದ್ರಗಳನ್ನು ಬಾಲನ್ಯಾಯ ಕಾಯಿದೆ ಅನ್ವಯ ನೋಂದಾಯಿಸಿಕೊಳ್ಳಬೇಕು ಹಾಗೂ ಆಗಿಂದಾಗ್ಗೆ ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಶಿಲನೆ ನಡೆಸುವಂತೆ ಆದೇಶಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೆಂಕಪ್ಪ ಎಮ್ ಮಾತನಾಡಿ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ನಿಯೋಜಿಸಲ್ಪಡುವ ಸಿಬ್ಬಂದಿಗಳಿಗೆ ಪೋಲಿಸ್ ಪರಿಶೀಲನೆ ಮಾಡದೇ ನೇಮಿಸಬಾರದು ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಹಿನ್ನಲೆಯನ್ನು ಪೋಲಿಸ್ ಪರಿಶೀಲನೆ ಮುಖಾಂತರ ಖಚಿತಪಡಿಸಿಕೊಳ್ಳುವುದು ಹಾಗೂ ಸಿಬ್ಬಂದಿಗಳ ಪೋಲಿಸ್ ಪರಿಶೀಲನೆಯನ್ನು ಶುಲ್ಕ ರಹಿತವಾಗಿ ನಡೆಸಿಕೊಡುವಂತೆ ಇಲಾಖೆಗೆ ಸೂಚಿಸಿದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ: ಮಕ್ಕಳ ಸ್ನೇಹಿ ನ್ಯಾಯಾಲಯವನ್ನಾಗಿ ಪರಿವರ್ತಿಸಲು ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮಕ್ಕಳ ಸ್ನೇಹಿ ವಿಶ್ರಾಂತಿ ಕೊಠಡಿಯನ್ನಾಗಿ ಪರಿವರ್ತಿಸುವ ಕಾಮಗಾರಿ ಬಾಕಿ ಇದೆ ಎಂದರು. ಭಿಕ್ಷಾಟಣೆ ನಿರತ ಮಕ್ಕಳು ಕಂಡು ಬಂದಾಗ ಸಮಾಜ ಕಲ್ಯಾಣ ಇಲಾಖೆಯ ಸಹಾಯ ಪಡೆದು ಮಕ್ಕಳನ್ನು ಪುರ್ನವಸತಿ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ ಎಂದು ಡಿಸಿಪಿಒ ಹೇಳಿದರು.

ಸಂಸ್ಥೆಯಲ್ಲಿ ಕಲಿಯುತ್ತಿದ್ದು ಕುಟುಂಬಕ್ಕೆ ಸೇರ್ಪಡೆಯಾದ ಮಕ್ಕಳು, ಮಕ್ಕಳ ಹೆತ್ತವರು ಜೈಲಿನಲ್ಲಿದ್ದರೆ, ಅನಾಥ ಮಕ್ಕಳು, ಏಕಪೋಷಕ ಮಕ್ಕಳಿಗೆ ಆದ್ಯತೆಯ ಮೇರೆಗೆ ಏಪ್ರಿಲ್ 2018 ರಿಂದ ಮಾರ್ಚ್ 2019 ರವರೆಗೆ ಸದರಿ ಸಾಲಿನಲ್ಲಿ ಇಲಾಖೆಯ ಪ್ರಧಾನ ಕಚೇರಿಯ ಆದೇಶದಂತೆ ಒಟ್ಟು 12 ತಿಂಗಳಿಗೆ ಒಂದು ಮಗುವಿಗೆ ರೂ.9,722ರಂತೆ ಆರ್‍ಜಿಎಸ್ ಮೂಲಕ ಜಮೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ವಿಶೇಷ ಪಾಲನಾ ಯೋಜನೆ; ಹೆಚ್‍ಐವಿ ಸೋಂಕಿತ, ಬಾದಿತ ಮಕ್ಕಳು ಹಾಗೂ ಇಂತಹ ಕಾಯಿಲೆಯಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆ ನಿಮಿತ್ತ ವಿಶೇಷ ಪಾಲನಾ ಯೋಜನೆಯ ಅನುಷ್ಠಾನಗೊಳಿಸುವ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿ, ಹೆಚ್ಚುವರಿ ಮಕ್ಕಳಿಗೆ ಸೌಲಭ್ಯ ಕೊಡುವ ಬಗ್ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಯೋಜನೆಯ ಅನ್ವಯ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 537 ಫಲಾನುಭವಿಗಳಿಗೆ ಘೋಷಣಾ ವೆಚ್ಚ ರೂ.21,48,000 ಜಮಾ ಮಾಡಲಾಗಿದೆ. ಈ ಫಲಾನುಭವಿಗಳಲ್ಲಿ 18 ವರ್ಷ ಪೂರ್ಣಗೊಂಡಿರುವುದರಿಂದ ಸದರಿ ಫಲಾನುಭವಿಗಳ ಬದಲಿಗೆ 28 ಹೊಸ ಫಲಾನುಭವಿಗಳ ಸೇರ್ಪಡೆಗೆ ಅನುಮೋದನೆ ಕೋರಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೆಂಕಪ್ಪ.ಎಂ ಮಾಹಿತಿ ನೀಡಿದರು.

ರಾಜ್ಯ ಮಕ್ಕಳ ರಕ್ಷಣಾ ನೀತಿ-2016: ದ.ಕ ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಲ್ಲಿ 1098 ಫಲಕವನ್ನು ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ನೋಡೆಲ್ ಶಿಕ್ಷಕರನ್ನು ನೇಮಕ ಮಾಡಿದ್ದು, ಮಕ್ಕಳ ಸುರಕ್ಷತೆ, ಆಪ್ತ ಸಮಾಲೋಚನೆ ಮತ್ತು ಆತ್ಮ ರಕ್ಷಣೆಯ ಬಗ್ಗೆ ತರಬೇತಿಯನ್ನು ನೀಡುತ್ತಿದೆ. ಶಾಲೆಗಳಲ್ಲಿ ಅಗತ್ಯ ಸಂದರ್ಭಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳಿಗೆ ಪೋಷಕರಿಗೆ ಮಾಹಿತಿಯನ್ನು ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಡಿಸಿಪಿಒ ವೆಂಕಪ್ಪ.ಎಂ ತಿಳಿಸಿದರು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಗೆ ರಕ್ಷಣಾ ಸಮಿತಿಯನ್ನು ರೂಪಿಸುವ ಬಗ್ಗೆ ಮಾಹಿತಿಯನ್ನು ನೀಡಿ ಸಿ.ಆರ್.ಪಿಗಳ ಮೂಲಕ ತರಬೇತಿಯನ್ನು ನೀಡಲಾಗಿದೆ ಎಂದರು.

ವಕ್ಫ್ ಇಲಾಖೆಯಲ್ಲಿರುವ ಮದರಸಗಳಲ್ಲಿ ಮುಖ್ಯೋಪಾದ್ಯಾಯರು, ಆಡಳಿತ ಸಮಿತಿಯ ಸದಸ್ಯರು ಮತ್ತು ಮಕ್ಕಳ ರಕ್ಷಕರು ಸೇರಿ ಮಕ್ಕಳ ಸುರಕ್ಷತಾ ಸಮಿತಿಯನ್ನು ರಚಿಸಿರುತ್ತಾರೆ, ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಕುಂದುಕೊರತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಮದರಸಗಳಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾದ ಬಗ್ಗೆ ದೂರು ಬಂದಿರುವುದಿಲ್ಲ ಎಂದು ಡಿಸಿಪಿಒ ವೆಂಕಪ್ಪ.ಎಂ ಹೇಳಿದರು.

ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪ ಎ.ಜೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಶಾಂತಿ ಸಂದೇಶ ಟ್ರಸ್ಟ್ ನಿರ್ದೇಶಕರು, ಸಿಸ್ಟರ್ ದುಲ್‍ಸಿನ್ ಕ್ರಾಸ್ಟಾ, ವಕ್ಫ್ ಅಧಿಕಾರಿ ಎಂ. ಅಬುಬಕ್ಕರ್, ಬಾಲನ್ಯಾಯ ಮಂಡಳಿ ಸದಸ್ಯೆ ಗೌರಿ ಕೆ.ಎಸ್, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಆಪ್ತ ಸಮಾಲೋಚಕರು ಆನಂದ್ ಎನ್ ಉಪಸ್ಥಿತರಿದ್ದರು.


Spread the love