ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ದೈಹಿಕ, ಮಾನಸಿಕ ಮತ್ತು ಕಾನೂನಾತ್ಮಕ ಅಂಶಗಳು ಕಾರ್ಯಗಾರ
ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸರ್ವಿಸ್, ಕುಟುಂಬ ಸಮಾಲೋಚನ ಕೇಂದ್ರವು (ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅನುದಾನಿತ) ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಭಾಗಿತ್ವದಲ್ಲಿ “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ದೈಹಿಕ, ಮಾನಸಿಕ ಮತ್ತು ಕಾನೂನಾತ್ಮಕ ಅಂಶಗಳು” ಎಂಬ ಜಿಲ್ಲಾ ಮಟ್ಟದ ಕಾರ್ಯಗಾರವು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಸಭಾಂಗಣದಲ್ಲಿ ಜರುಗಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಉಸ್ಮಾನ್. ಎ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೊಕ್ಸೊ ಕಾಯ್ದೆ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ತರವಾದುದು ಈ ನಿಟ್ಟಿನಲ್ಲಿ ಈ ಕಾರ್ಯಗಾರವು ಸಿಬ್ಬಂದಿಗಳಿಗೆ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಪೂರ್ಣಿಮಾ. ಜೆ ಇವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ದೈಹಿಕ ಆಯಾಮ, ಡಾ. ಕ್ಯಾರೋಲಿನ್ ಡಿ’ಸೋಜ ಇವರು ಮಾನಸಿಕ ಆಯಾಮ ಮತ್ತು ವಕೀಲರಾದ ನಿಕೇಶ್ ಶೆಟ್ಟಿ ಇವರು ಕಾನೂನಾತ್ಮಕ ಆಯಾಮದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಆರ್.ಪಿ, ಸಿ.ಆರ್.ಪಿಗಳು, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಾರ್ಡನ್‍ಗಳು, ಸಮಾಜ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಪ್ರಾಂಶುಪಾಲರಾದ ಡಾ. ಜ್ಯೂಲಿಯೇಟ್ ಸಿ.ಜೆ ಇವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಯಾದ ಇವ್ಲೀನ್ ಬೆನಿಸ್ ಸ್ವಾಗತಿಸಿದರು. ಆಪ್ತಸಮಾಲೋಚಕರಾದ ಶ್ವೇತಲ್ ವಂದಿಸಿದರು. ಯೋಗೀಶ್ ಮಲ್ಲಿಗೆಮಾಡು ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷರಾದ ಕಾಲಿನ್ ಡಿ’ಸೋಜ, ಕುಟುಂಬ ಸೇವಾ ಸಂಸ್ಥೆಯ ನಿರ್ದೇಶಕರಾದ ಹಿಲಾರಿಯಾ ಪಿಂಟೊ, ಆಪ್ತಸಮಾಲೋಚಕರಾದ ಸಂಗೀತಾ ವರ್ಗಿಸ್ ಮತ್ತು ಗೀತಾರವರು ಉಪಸ್ಥಿತರಿದ್ದರು.