ಮಗುವಿನಲ್ಲಿ ದೇವರನ್ನು ಕಾಣುತ್ತೇವೆ; ವಿಕ ಮುದ್ದುಕಂದ ಬಹುಮಾನ ಸ್ಪರ್ಧೆ ವಿತರಿಸಿ ಶ್ರೀನಿವಾಸ್ ದೇಶಪಾಂಡೆ
ಮಂಗಳೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಟೈಮ್ಸ್ ಸಮೂಹದ ಕನ್ನಡ ದಿನಪತ್ರಿಕೆ `ವಿಜಯ ಕರ್ನಾಟಕ- ಐಡಿಯಲ್ ಮುದ್ದುಕಂದ ಮತ್ತು ಮುದ್ದುಕೃಷ್ಣ’ 2016 ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ನಗರದ ಕೊಡಿಯಾಲ್ಬೈಲ್ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಬಂಧಕ ಶ್ರೀನಿವಾಸ್ ದೇಶಪಾಂಡೆ ಮಕ್ಕಳ ಆಟ, ಓಟ, ನಗುಮುಖ ಎಲ್ಲವೂ ಚೆಂದ. ಮುದ್ದು ಕಂದಮ್ಮಗಳ ಭಾವಚಿತ್ರ ಆಹ್ವಾನಿಸಿ ಸ್ಪರ್ಧೆ ಏರ್ಪಡಿಸಿ ಒಂದು ಅಪೂರ್ವ ಕೌಟುಂಬಿಕ ಕಾರ್ಯಕ್ರಮವನ್ನು ವಿಜಯ ಕರ್ನಾಟಕ ಪತ್ರಿಕೆ ಅತ್ಯಂತ ಶಿಸ್ತುಬದ್ಧವಾಗಿ ಆಯೋಜಿಸಿದೆ. ಪ್ರತಿ ಮಗುವಿನಲ್ಲಿ ಮುಗ್ಧತೆ ಇದೆ, ಮಗು ಏನು ಮಾಡಿದರೂ ಅದರಲ್ಲಿ ವಿಶೇಷತೆ ಇರುತ್ತದೆ. ಈ ಕಾರಣದಿಂದ ನಾವೆಲ್ಲರೂ ಮಗುವಿನಲ್ಲಿ ದೇವರನ್ನು ಕಾಣುತ್ತೇವೆ. ಕಾರ್ಯಕ್ರಮದಲ್ಲಿ ಮಕ್ಕಳ ಕಲರವ ಕೇಳಿ ಹೃದಯ ತುಂಬಿ ಬಂದಿದೆ. ವಿಜೇತ ಮಕ್ಕಳ ವಿಶೇಷ ಪುರವಣಿ ಮನದಲ್ಲಿ ಮಂದಹಾಸ ಮೂಡಿಸಿದೆ. ಮುಂದೆಯೂ ಪತ್ರಿಕೆ ಇಂತಹಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಿ ಎಂದು ಹೇಳಿದರು.
ಚಲನಚಿತ್ರ ನಟ ರೂಪೇಶ್ ಶೆಟ್ಟಿ ಮಾತನಾಡಿ, ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರೆ ಮಕ್ಕಳ ಪೋಷಕರು ಇದರಲ್ಲಿ ಉತ್ಸಾಹ ತೋರಿದ್ದಾರೆ ಎಂದೇ ಅರ್ಥ. ಸಾವಿರಾರು ಮಕ್ಕಳ ಪೋಷಕರ ಆಸಕ್ತಿ ನೋಡಿ ತುಂಬಾ ಖುಷಿಯಾಗಿದೆ. ಒಬ್ಬ ಚಲನಚಿತ್ರ ಕಲಾವಿದನಾಗಿ ವಿಜಯ ಕರ್ನಾಟಕ ಪತ್ರಿಕೆ ಬಗ್ಗೆ ಹೆಮ್ಮೆ ಇದೆ. ತುಳು ಚಿತ್ರ ಸೇರಿದಂತೆ ಕರಾವಳಿಯ ಚಿತ್ರೋದ್ಯಮ ಬೆಳವಣಿಗೆಗೆ ವಿಜಯ ಕರ್ನಾಟಕ ಪ್ರತಿ ವಾರ `ಕೋಸ್ಟಲ್ ವುಡ್’ ವಿಶೇಷ ಪುರವಣಿ ಪ್ರಕಟಿಸುವ ಮೂಲಕ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಡಿಯಲ್ ಐಸ್ ಕ್ರೀಂ ಪಾಲುದಾರ ಮುಕುಂದ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಟೈಮ್ಸ್ ಸಮೂಹದ ವಿಜಯ ಕರ್ನಾಟಕ ಪತ್ರಿಕೆ ಆಯೋಜಿಸುತ್ತಿರುವ ಮುದ್ದು ಕಂದ ಹಾಗೂ ಮುದ್ದುಕೃಷ್ಣ ಮಕ್ಕಳ ಫೋಟೊ ಸ್ಪರ್ಧೆಗೆ ಪ್ರಾಯೋಜಕರಾಗಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಮುದ್ದುಕಂದ ಸ್ಪರ್ಧೆಯ ತೀರ್ಪುಗಾರರಾದ ಚಿತ್ರಕಲಾವಿದ ಕಂದನ್ ಜಿ., ಛಾಯಾಚಿತ್ರಗ್ರಾಹಕ ಲಕ್ಷ್ಮೀನಾರಾಯಣ ಬಜಾಲ್, ಮುದ್ದುಕೃಷ್ಣ ಫೋಟೊ ಸ್ಪರ್ಧೆಯ ತೀರ್ಪುಗಾರರಾದ ನೃತ್ಯ ಗುರು ಶ್ರೀಧರ ಹೊಳ್ಳ, ಛಾಯಾಚಿತ್ರಗ್ರಾಹಕ ತಾನೋಜಿ ಬಿ.ರಾವ್, ಟೈಮ್ಸ್ ಸಮೂಹದ ಆರ್ಎಂಡಿ ವಿಭಾಗದ ಚೀಫ್ ಮ್ಯಾನೇಜರ್ ಕದ್ರಿ ನವನೀತ ಶೆಟ್ಟಿ, ವಿಜಯ ಕರ್ನಾಟಕ ರೆಸ್ಪಾನ್ಸ್ ವಿಭಾಗದ ಮುಖ್ಯ ಪ್ರಬಂಧಕ ರಾಮಕೃಷ್ಣ ಡಿ. ಉಪಸ್ಥಿತರಿದ್ದರು.
ವಿಜೇತ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿಜಯ ಕರ್ನಾಟಕ ಮಂಗಳೂರು ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ವರದಿಗಾರ ಆರ್.ಸಿ.ಭಟ್ ವಂದಿಸಿದರು. ಪ್ರಧಾನ ವರದಿಗಾರ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.