ಮಟಪಾಡಿ -ನೀಲಾವರ ಸಂಪರ್ಕ ರಸ್ತೆಯಲ್ಲಿ ಹೊಂಡ – ಗುಂಡಿ; ಪ್ರಯಾಣಿಕರಿಗೆ ಸಂಚಾರ ದುಸ್ತರ
ಉಡುಪಿ: ಮಳೆಗಾಲ ಬಂತಂದ್ರೆ ಸಾಕು ನಮ್ಮ ರಸ್ತೆಗಳ ಹಣೆಬರಹ ಬಟಾಬಯಲಾಗುತ್ತದೆ. ಅಂತೆಯೇ ಬ್ರಹ್ಮಾವರ ತಾಲೂಕಿನ ಈ ರಸ್ತೆ ಸ್ಥಿತಿ ನೋಡಿದ್ರೆ ದೇವ್ರೇ ಗತಿ ಅನ್ನೋ ಹಾಗಾಗಿದೆ. ಮಳೆ ಬಂತಂದ್ರೆ ಸಾಕು ಇಲ್ಲಿನ ರಸ್ತೆ ಮಾಯವಾಗಿ ಕೆಸರು ಗದ್ದೆಯಂತಾಗುತ್ತದೆ. ಇದು ಬ್ರಹ್ಮಾವರ ತಾಲೂಕು ಕೇಂದ್ರದಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿರೋ ಮಟಪಾಡಿ ಹಾಗೂ ನೀಲಾವರ ಸಂಪರ್ಕ ರಸ್ತೆಯ ಕಥೆಯಾಗಿದೆ. ಸದ್ಯ ಈ ರಸ್ತೆಯಲ್ಲಿ ಸಂಚರಿಸೋದಕ್ಕೂ ಆಗದೆ, ಜನ ರಸ್ತೆ ರಿಪೇರಿಗಾಗಿ ಬೀದಿಗಿಳಿದು ಪ್ರತಿಭಟಿಸುವಂತಾಗಿದೆ.
ಬ್ರಹ್ಮಾವರ ತಾಲೂಕು ಕೇಂದ್ರದಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿರೋ ಮಟಪಾಡಿ ಹಾಗೂ ನೀಲಾವರ ಸಂಪರ್ಕ ರಸ್ತೆಗೆ ಕಳೆದ ಕೆಲ ವರುಷಗಳ ಹಿಂದೆ ಇಲ್ಲಿ ಜಿಲ್ಲಾ ಪಂಚಾಯತ್ ಅನುದಾನದಡಿ ಡಾಮರೀಕರಣ ಆಗಿತ್ತು. ಮರುವರುಷವೇ ಮಳೆಗಾಲದ ಸಂದರ್ಭ ಡಾಮರು ಕಿತ್ತುಹೋಗಿ ಜನ ಹೊಂಡ-ಗುಂಡಿಗಳಲ್ಲೇ ಸಂಚರಿಸೋ ಫಜೀತಿಗೊಳಗಾಗಿದ್ದಾರೆ. ಕಳೆದ ಹಲವು ಮಳೆಗಾಲವನ್ನು ಇದೇ ಕೆಟ್ಟು ಹೋದ ರಸ್ತೆಯಲ್ಲಿಯೇ ಜನಜೀವನ ನಡೆಸುವಂತಾಗಿತ್ತು. ಆದ್ರೆ ಈ ಬಾರಿ ಇನ್ನಷ್ಟು ಹೊಂಡಗಳು ಸೃಷ್ಟಿಯಾಗಿದ್ದು, ಜನಸಂಚರಿಸೋದಕ್ಕೂ ಪರದಾಡುತ್ತಿದ್ದಾರೆ. ಅಲ್ಲದೇ ಬೈಕ್ ಗಳಿಂದ ಸವಾರರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿದೆ. ಇದರಿಂದ ಜನ ರೊಚ್ಚಿಗೆದ್ದಿದ್ದು ಕೆಸರುಮಯವಾಗಿರುವ ಹೊಂಡ ತುಂಬಿದ ರಸ್ತೆಯಲ್ಲಿ ನೇಜಿ ನೆಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಈ ರಸ್ತೆಯಾಗಿ ಬಸ್ಸುಗಳ ಓಡಾಟವಿತ್ತು. ಕಾರಣ, ಈ ರಸ್ತೆಯಾದಿಯಾಗಿ ತೆರಳಿದರೆ ಸುಲಭವಾಗಿ ನೀಲಾವರ ಮಹಿಷ ಮರ್ದಿನಿ ದೇವಸ್ಥಾನವನ್ನು ತಲುಪಬಹುದು. ಆ ಕಾರಣಕ್ಕಾಗಿ ಈ ರಸ್ತೆಯಲ್ಲಿ ಲಘು ಹಾಗೂ ಘನ ವಾಹನಗಳ ಓಡಾಟ ಹೇರಳವಾಗಿತ್ತು. ಆದ್ರೆ ಬರ ಬರುತ್ತಾ ರಸ್ತೆ ಕೆಟ್ಟು ಹೋದ ಪರಿಣಾಮ ಹಾಗೂ ರಸ್ತೆಯ ಅಗಲವು ಕಿರಿದಾಗಿದ್ದರಿಂದ ಬಸ್ಸುಗಳ ಓಡಾಟ ಸ್ಥಗಿತಗೊಂಡಿತ್ತು. ಇದ್ರಿಂದಾಗಿ ಈ ಹದಗೆಟ್ಟ ರಸ್ತೆಯಲ್ಲಿಯೇ ಜನ ಪೇಟೆಗೆ ಹಾಗೂ ಮಕ್ಕಳು ಶಾಲೆಗೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ಪರಿಣಾಮ ಡಾಂಬರು ಕಿತ್ತು ಹೋಗುತ್ತಿರುವುದರಿಂದ, ಕಳೆದ ಚುನಾವಣೆ ಸಂದರ್ಭದಲ್ಲಿ ಅಂದಿನ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ 5 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ರೂ, ಇದುವರೆಗೂ ಕಾಮಗಾರಿಯಾಗದೇ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಗಣಪತಿ ನಾಯಕ್.
ಹದಗೆಟ್ಟ ರಸ್ತೆಯಲ್ಲಿ ಸಂಚರಿಸೋದಂದ್ರೆ ಈ ಭಾಗದ ಜನರಿಗೆ ಹರಸಾಹಸದ ಕೆಲಸ. ಪ್ರತಿದಿನವೂ ಕೆಸರು ಮಯವಾಗಿರುವ ಈ ಹೊಂಡ-ಗುಂಡಿ ತುಂಬಿದ ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ಅತ್ತ ಒಂದು ಕಡೆಯಲ್ಲಿ ಈ ರಸ್ತೆಯುದ್ದಕ್ಕೆ ಚರಂಡಿ ಇಲ್ಲದೇ ಇರೋದ್ರಿಂದ ಮಳೆ ನೀರು ಹರಿದು ಹೋಗದೆ ರಸ್ತೆಯಲ್ಲಿಯೇ ಶೇಖರಣೆಗೊಳ್ಳುತ್ತಿದೆ. ಇದರಿಂದಾಗಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು, ಇಲ್ಲದೆ ಹೋದಲ್ಲಿ ಉಗ್ರ ಪ್ರತಿಭಟನೆಗೆ ಆ ಭಾಗದ ಮಂದಿ ಸಿದ್ದತೆ ನಡೆಸಿಕೊಂಡಿದ್ದಾರೆ ಎನ್ನುವ ಎಚ್ಚರಿಕೆಯನ್ನು ಸ್ಥಳೀಯ ನಿವಾಸಿ ಸ್ಟೀವನ್ ಸಿಕ್ವೇರಾ ನೀಡಿದ್ದಾರೆ.