ಮಡಿಕೇರಿ – ಸಂಪಾಜೆ ಮಧ್ಯೆ ರಾತ್ರಿ ಸಂಚಾರ ನಿಷೇಧ: ಕೊಡಗು ಜಿಲ್ಲಾಧಿಕಾರಿ ಆದೇಶ

Spread the love

ಮಡಿಕೇರಿ – ಸಂಪಾಜೆ ಮಧ್ಯೆ ರಾತ್ರಿ ಸಂಚಾರ ನಿಷೇಧ: ಕೊಡಗು ಜಿಲ್ಲಾಧಿಕಾರಿ ಆದೇಶ

ಸುಳ್ಯ: ರಾಷ್ಟ್ರೀಯ ಹೆದ್ದಾರಿ – 275ರ ಸಂಪಾಜೆಯಿಂದ ಮಡಿಕೇರಿ ಮಧ್ಯೆ 4 ದಿನಗಳ ಕಾಲ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ವಾಹನ ಸಂಚಾರ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ಜು.18 ರಿಂದ 22ರವರೆಗೆ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅತಿ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ಇರುತ್ತದೆ. ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಂಚರಿಸುವ ವಾಹನಗಳನ್ನು ಹೊರತು ಪಡಿಸಿ, ಉಳಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಸೂಚಿಸಲಾಗಿದೆ.

ದಿನಾಂಕ 18.07.2024 ರಂದು, ಕೊಡಗು ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಆದೇಶದಂತೆ. ರಾಷ್ಟ್ರೀಯ ಹೆದ್ದಾರಿ – 275ರಲ್ಲಿ, ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಎಂಬಲ್ಲಿ ಭೂಕುಸಿತ/ಗುಡ್ಡಕುಸಿತ ಉಂಟಾಗುವ ಸಂಭವವಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಿನಾಂಕ 18.07.2024 ರಿಂದ 22.07.2024ರ ವರೆಗೆ, ಪ್ರತಿ ದಿನ ರಾತ್ರಿ 8.00 ಗಂಟೆಯಿಂದ, ಮರುದಿನ ಬೆಳಗ್ಗೆ 6.00 ಗಂಟೆಯವರೆಗೆ ಸದ್ರಿ ಮಾರ್ಗವಾಗಿ ಸಾಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು (ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ / ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ) ನಿರ್ಬಂಧಿಸಲಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ, ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು, ಬದಲಿ ಮಾರ್ಗವಾಗಿ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿ ತಿಳಿಸಲಾಗಿದೆ.


Spread the love