ಮಣಿಪಾಲದಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆ : ಜುಲೈ 10 ರೊಳಗೆ ಮಾಹಿತಿ ನೀಡಿ – ಹೆಪ್ಸಿಬಾ ರಾಣಿ ಕೊರ್ಲಪಾಟಿ

Spread the love

ಮಣಿಪಾಲದಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆ : ಜುಲೈ 10 ರೊಳಗೆ ಮಾಹಿತಿ ನೀಡಿ – ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ: ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಕೆ.ಎಂ.ಎಫ್ ಡೈರಿ ಕ್ರಾಸ್ ವರೆಗಿನ ರಸ್ತೆಯಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆ ರೂಪಿಸಲು ನಿರ್ಧರಿಸಿದ್ದು, ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ, ನಗರಸಭೆ, ಮೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳು ತಮ್ಮ ಅಗತ್ಯತೆಗಳ ಕುರಿತು ಜುಲೈ 10 ರ ಒಳಗೆ ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಸ್ಥಿರ ಸಂಚಾರ ವ್ಯವಸ್ಥೆಗೆ ಯೋಜನೆ ರೂಪಿಸುವ ಮುನ್ನ, ಈ ಪ್ರದೇಶವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಯಾವ ಪ್ರದೇಶದಲ್ಲಿ, ಏನು ಅಗತ್ಯತೆ ಇದು ಎನ್ನುವುದನ್ನು ತಿಳಿದುಕೊಳ್ಳಬೇಕು, ಇಂಟರ್ ಲಾಕ್ ಅಳವಡಿಸಿ ಪಾದಚಾರಿಗಳಿಗೆ ಪುಟ್ಪಾತ್ ನಿರ್ಮಾಣ ಮಾಡಬೇಕು, ಎಂಐಟಿ ಬಳಿ ಬಸ್ ನಿಲ್ದಾಣದ ಬದಲು ಬಸ್ ಬೇ ವ್ಯವಸ್ಥೆ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪುಟ್ ಪಾತ್ ನಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ರೇಲಿಂಗ್ ನಿರ್ಮಾಣ ಮಾಡುವಂತೆ ಹಾಗೂ ಎಲ್ಲಾ ಇಲಾಖೆಗಳು ಸಲ್ಲಿಸುವ ಮಾಹಿತಿಯನ್ನು ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿಗಳು ಪರಿಶೀಲಿಸುವಂತೆ ತಿಳಿಸಿದರು.

ಈ ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಹೊಸ ತಂತ್ರಜ್ಞಾನದೊಂದಿಗೆ ಮುಂದಿನ ಭವಿಷ್ಯದ ದೃಷ್ಠಿಯಿಂದ ದೀರ್ಘಕಾಲೀನ ಮಾದರಿ ಯೋಜನೆಯನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಮಾಹೆಯ ಆರ್ಕಿಟೆಕ್ ವಿಭಾಗಕ್ಕೆ ನೀಡಿ, ಶೀಘ್ರದಲ್ಲಿ ನೀಲನಕ್ಷೆ ಸಿದ್ದಪಡಿಸುವಂತೆ ಹೆಪ್ಸಿಬಾ ರಾಣಿ ತಿಳಿಸಿದರು.

ಉಡುಪಿ ನಗರಸಭೆಯಿಂದ ಈ ಕಾರ್ಯಕ್ಕೆ ಸಂಬಂಧಪಟ್ಟಂತೆ ಅಗತ್ಯ ಅನುಮತಿಗಳನ್ನು ಹಾಗೂ ಸೂಕ್ತ ಸಹಕಾರವನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ನೀಡುವಂತೆ ಹಾಗೂ ರಸ್ತೆ ಅಗಲೀಕರಣದಿಂದ ಸ್ಥಳಾಂತರ ಮಾಡುವ ವಿದ್ಯುತ್ ಕಂಬಗಳನ್ನು ಪ್ರಸ್ತುತ ಇರುವ ಗುತ್ತಿಗೆದಾರರಿಂದಲೇ ಮರು ನಿರ್ಮಾಣ ಮಾಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭ, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಮಣಿಪಾಲ ಆರ್ಕಿಟೆಕ್ ವಿಭಾಗದ ಮುಖ್ಯಸ್ಥೆ ದೀಪಿಕಾ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love