ಮಣಿಪಾಲ ಆರೋಗ್ಯ ಕಾರ್ಡ್-2024ರ ನೋಂದಣಿ ಆರಂಭ
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಮಣಿಪಾಲ ಆರೋಗ್ಯ ಕಾರ್ಡ್- 2024ರ ನೋಂದಣಿಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.
ಮಾಹೆಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು ಹೆಚ್ಚು ಗುಣಮಟ್ಟದ ಆರೋಗ್ಯ ಚಿಕಿತ್ಸೆ ಯನ್ನು ಕಡಿಮೆ ಖರ್ಚಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಜನಸಾಮಾನ್ಯರಿಗೆ ನೀಡುವ ಸಂಸ್ಥೆಯ ಉದ್ದೇಶವನ್ನು ಈ ಆರೋಗ್ಯ ಕಾರ್ಡಿನ ಮೂಲಕ ಸಾಕಾರಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮಣಿಪಾಲ ಆರೋಗ್ಯ ಕಾರ್ಡ್, ಇಡೀ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ ಎಂಬ ಅಡಿಬರಹದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಈ ಕಾರ್ಡ್ ಹೊಂದಿದೆ. ಮಾಹೆಯ ಕುಲಪತಿ ಡಾ.ರಾಮದಾಸ್ ಎಂ.ಪೈ ನೇತೃತ್ವದಲ್ಲಿ 2000ರಲ್ಲಿ ಪ್ರಾರಂಭಗೊಂಡ ಮಣಿಪಾಲ್ ಹೆಲ್ತ್ ಕಾರ್ಡ್, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಪ್ರಯತ್ನವನ್ನು ಕಳೆದ ಎರಡು ದಶಕಗಳಿಂದ ಮಾಡಲಾಗುತ್ತಿದೆ ಎಂದರು ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲದೇ ಕರ್ನಾಟಕದ ಇನ್ನೂ 12-15 ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗಿದೆ. ಸದ್ಯ ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಗಳಲ್ಲದೇ ನೆರೆಯ ರಾಜ್ಯಗಳಾದ ಕೇರಳ ಮತ್ತು ಗೋವಾಗಳ ಜನತೆಗೂ ಇದನ್ನು ವಿಸ್ತರಿಸಲಾಗಿದೆ ಎಂದು ಡಾ.ಬಲ್ಲಾಳ್ ತಿಳಿಸಿದರು.
ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ ರಾವ್ ಮಾತನಾಡಿ, 2019ರಲ್ಲಿ ಕಾರ್ಡ್‌ನ್ನು ಡಜಿಟಲ್ ಮೋಡ್‌ಗೆ ಪರಿವರ್ತಿಸಲಾಯಿತು. ಇದನ್ನು ಗ್ರಾಹಕ ಸ್ನೇಹಿಯಾಗಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ಕಾರ್ಡ್ ರಹಿತ ಸೇವೆ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.
ಕಳೆದ 23 ವರ್ಷಗಳಲ್ಲಿ ಲಕ್ಷಾಂತರ ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. 2023ರಲ್ಲಿ 3,60,000 ಸದಸ್ಯರು ಮಣಿಪಾಲ ಆರೋಗ್ಯ ಕಾರ್ಡ್‌ಗೆ ಹೆಸರು ನೋಂದಾಯಿಸಿಕೊಂಡಿದ್ದರು. ಇಡೀ ವರ್ಷದಲ್ಲಿ ಅವರಿಗೆ ಸುಮಾರು 16 ಕೋಟಿ ರೂ.ಗಳಷ್ಟು ರಿಯಾಯಿತಿಯನ್ನು ಮಾಹೆಯಿಂದ ನೀಡಲಾಗಿದೆ ಎಂದು ಡಾ.ರಾವ್, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಶೇ.52 ಮತ್ತು ಒಳರೋಗಿ ವಿಭಾಗದಲ್ಲಿ ಶೇ.20ರಷ್ಟು ಮಂದಿ ಮಣಿಪಾಲ ಹೆಲ್ತ್ ಕಾರ್ಡ್‌ನ ಪ್ರಯೋಜನ ಪಡೆದಿದ್ದಾರೆ ಎಂದರು.
ಕಾರ್ಡುದಾರರು ಮಣಿಪಾಲ ಆಸ್ಪತ್ರೆ ಗುಂಪಿಗೆ ಸೇರಿದ ಮಣಿಪಾಲ ಕೆಎಂಸಿ ಆಸ್ಪತ್ರೆ, ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಅತ್ತಾವರ, ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಹಾಗೂ ಗೋವಾದ ಮಣಿಪಾಲ್ ಆಸ್ಪತ್ರೆಗಳಲ್ಲಿ ಈ ಕಾರ್ಡ್‌ನ ಪ್ರಯೋಜನ ಪಡೆಯಬಹುದು ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಿವರಿಸಿದರು.
ಈ ಕಾರ್ಡ್ ಮೂಲಕ ಮೇಲಿನ ಆಸ್ಪತ್ರೆಗಳಲ್ಲಿ ದೊರಕುವ ರಿಯಾಯಿತಿ ಗಳು ಮತ್ತು ಹೆಚ್ಚಿನ ಮಾಹಿತಿ 9980854700 / 08202923748 ಅನ್ನು ಸಂಪರ್ಕಿಸಬಹುದು. ನಮ್ಮೆಲ್ಲಾ ಅಧಿಕೃತ ಪ್ರತಿನಿಧಿಗಳ ಮೂಲಕ ಕೂಡ ನೋಂದಣಿ ಸೌಲಭ್ಯ ಲಭ್ಯವಿದೆ ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆ ಮಣಿಪಾಲದ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್, ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಶಿಕರಣ್, ಕಾರ್ಕಳ ಆಸ್ಪತ್ರೆಯ ಡಾ. ಕೀರ್ತಿನಾಥ್ ಬಲ್ಲಾಳ್, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್ ಹಾಗೂ ವ್ಯವಸ್ಥಾಪಕ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.