Home Mangalorean News Kannada News ಮಣಿಪಾಲ: ಕಾನೂನು ಉಲ್ಲಂಘಿಸಿದ ಆರೋಪ; ಎರಡು ಲಾಡ್ಜ್, ಬಾರ್ ಗಳ ಪರವಾನಿಗೆ ರದ್ದು

ಮಣಿಪಾಲ: ಕಾನೂನು ಉಲ್ಲಂಘಿಸಿದ ಆರೋಪ; ಎರಡು ಲಾಡ್ಜ್, ಬಾರ್ ಗಳ ಪರವಾನಿಗೆ ರದ್ದು

Spread the love

ಮಣಿಪಾಲ: ಕಾನೂನು ಉಲ್ಲಂಘಿಸಿದ ಆರೋಪ; ಎರಡು ಲಾಡ್ಜ್, ಬಾರ್ ಗಳ ಪರವಾನಿಗೆ ರದ್ದು

ಮಣಿಪಾಲ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸುತ್ತಿರುವ ಆರೋಪದಲ್ಲಿ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ಪರವಾನಿಗೆ ಯನ್ನು ಪೊಲೀಸ್ ಇಲಾಖೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯಿಂದ ರದ್ದುಪಡಿಸಲಾಗಿದೆ.

ಮಣಿಪಾಲ ಠಾಣೆ ವ್ಯಾಪ್ತಿಯ ಕಟ್ಟಡ ಸಂಖ್ಯೆ 4-94ಇ4ರಲ್ಲಿ ನಡೆಸುತ್ತಿರುವ ಡೀ-ಟೀ(ಭವಾನಿ) ಲಾಡ್ಜಿಂಗ್ ರೆಸ್ಟೋರೆಂಟ್ ಹಾಗೂ ನಗರಸಭೆ ವ್ಯಾಪ್ತಿಯ ಕಟ್ಟಡ ಸಂಖ್ಯೆಯಲ್ಲಿರುವ ಶಾಂಭವಿ ಅಸೋಸಿಯೇಟ್ಸ್ನ ಸೆವೆಂತ್ ಹೆವೆನ್ ಎಂಬ ಬಾರ್ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ತಡರಾತ್ರಿವರೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ, ಬಾರ್ ರೆಸ್ಟೋರೆಂಟ್ ನಿರ್ವಹಣೆ ವೇಳೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಮತ್ತು ಪದೇ ಪದೇ ಅಪರಾಧ ಪ್ರಕರಣಗಳು ನಡೆಯುತ್ತಿರುವುದರಿಂದ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉದ್ದಿಮೆಯ ಪರವಾನಿಗೆಯನ್ನು ರದ್ದುಪಡಿಸುವಂತೆ ಪೊಲೀಸ್ ಅಧೀಕ್ಷಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಡೀಟೀ (ಭವಾನಿ) ಲಾಡ್ಜಿಂಗ್ ಆ್ಯಂಡ್ ರೆಸ್ಟೋರೆಂಟ್ಗೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದು, ಸೆವೆಂತ್ ಹೆವೆನ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ 2024ನೇ ಸಾಲಿನಲ್ಲಿ ಡಿಜೆ ಬಳಸಿ ಪಾರ್ಟಿ ನಡೆಸುತ್ತಿರುವ ಬಗ್ಗೆ ದಾಖಲಾದ ಒಂದು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು, ಮುಂಬೈಯಲ್ಲಿ ಒಂದು ಪ್ರಕರಣ ಹಾಗೂ ಅಬಕಾರಿ ಇಲಾಖೆಯಿಂದ ಒಂದು ಪ್ರಕರಣ ದಾಖಲಾಗಿದೆ.

ಅದರಂತೆ ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲದ ಈಶ್ವರ ನಗರದಲ್ಲಿರುವ ಕಟ್ಟಡ ಸಂಖ್ಯೆ 4-94 ಇ4ರಲ್ಲಿ ನಡೆಸುತ್ತಿರುವ ಡೀ-ಟೀ (ಭವಾನಿ) ಲಾಡ್ಜಿಂಗ್ ರೆಸ್ಟೋರೆಂಟ್ ಹಾಗೂ ನಗರಸಭಾ ವ್ಯಾಪ್ತಿಯ ಕಟ್ಟಡದಲ್ಲಿರುವ ಶಾಂಭವಿ ಅಸೋಸಿಯೇಟ್ಸ್ನ ಸೆವೆಂತ್ ಹೆವೆನ್ ಬಾರ್ ರೆಸ್ಟೋರೆಂಟ್ ಎಂಬ ಹೆಸರಿನ ಉದ್ದಿಮೆಗಳ ಪರವಾನಿಗೆಯನ್ನು ನಗರಸಭಾ ವತಿಯಿಂದ ರದ್ದುಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.


Spread the love

Exit mobile version