Home Mangalorean News Kannada News ಮಣಿಪಾಲ ರಾ.ಹೆದ್ದಾರಿ ಕಾಮಗಾರಿಯಿಂದ ಅಫಘಾತ: ಗುತ್ತಿಗೆದಾರ, ಇಂಜಿನಿಯರ್ ವಿರುದ್ದ ದೂರು

ಮಣಿಪಾಲ ರಾ.ಹೆದ್ದಾರಿ ಕಾಮಗಾರಿಯಿಂದ ಅಫಘಾತ: ಗುತ್ತಿಗೆದಾರ, ಇಂಜಿನಿಯರ್ ವಿರುದ್ದ ದೂರು

Spread the love

ಮಣಿಪಾಲ ರಾ.ಹೆದ್ದಾರಿ ಕಾಮಗಾರಿಯಿಂದ ಅಫಘಾತ: ಗುತ್ತಿಗೆದಾರ, ಇಂಜಿನಿಯರ್ ವಿರುದ್ದ ದೂರು

ಉಡುಪಿ:  ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾಗುತ್ತಿರುವ ಜೀವಹಾನಿಗಳಿಗೆ ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳ ವಿರುದ್ದ ಉಡುಪಿ ಭಾರತೀಯ ಸಹಾಯ ಸೇವಾ ಸಂಘಟನೆ ಶನಿವಾರ ಮಣಿಪಾಲ ಠಾಣೆಯಲ್ಲಿ ದೂರು ನೀಡಿದೆ.

ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಮತ್ತು ಇಲಾಖೆಯ ಇಂಜಿನಿಯರ್ ಗಳ ಕರ್ತವ್ಯ ಲೋಪದಿಂದ ಈ ವರೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ಅಫಘಾತಗಳು ಸಂಭವಿಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಕಾಮಗಾರಿ ಸ್ಥಳದಲ್ಲಿ ಯಾವುದೇ ಎಚ್ಚರಿಕೆ, ಸೂಚನಾ ಫಲಕಗಳನ್ನು ಅಳವಡಿಸದೆ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇಂದ್ರಾಳಿ ರೈಲ್ವೆ ಸೇತುವೆ ಬಳಿ, ಮಣಿಪಾಲ ಎಂಐಟಿ ಬಳಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇದು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಅಲ್ಲದೆ ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದು ನಡೆಯುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರದೇಶಗಳಲ್ಲಿ ಈವರೆಗೆ ನಡೆದಿರುವ ಪ್ರಾಣಹಾನಿ ಮತ್ತು ಅಫಘಾತಗಳಿಗೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರುಗಳೇ ನೇರ ಹೊಣೆಗಾರರಾಗಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಭಾರತೀಯ ಸಹಾಯ ಸೇವಾ ಸಂಘಟನೆ ದೂರಿನಲ್ಲಿ ಒತ್ತಾಯಿಸಿದೆ.

ಇದೇ ವೇಳೆ ಸಂಘಟನೆಯ ವತಿಯಿಂದ ಗುತ್ತಿಗೆದಾರರು ಮತ್ತು ಇಂಜಿನಿಯರುಗಳ ವಿರುದ್ದ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಜಿಲ್ಲಾ ಪೋಲಿಸ್ ಅಧಿಕ್ಷಕಿ ನಿಶಾ ಜೇಮ್ಸ್ ಅವರಿಗೂ ಸಹಾಯ ಸೇವಾ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಭಾರತೀಯ ಸಹಾಯ ಸೇವಾ ಸಂಘಟಣೆ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಉಪಾಧ್ಯಕ್ಷ ರಮೇಶ್ ಕಾಂಚನ್, ಕಾರ್ಯದರ್ಶಿಗಳಾದ ನ್ಯಾಯವಾದಿ ಅಸಾದುಲ್ಲಾ, ಸಂತೋಶ್ ಜಿ, ಸುನೀಲ್ ಡಿ ಬಂಗೇರಾ, ಪ್ರಮೀಳಾ ಜತ್ತನ್ನ ಉಪಸ್ಥಿತರಿದ್ದರು.


Spread the love

Exit mobile version