ಮಣಿಪಾಲ ವೈದ್ಯರ ಕೈ ಸೇರಿದ ಎಫ್‌ಎಸ್‌ಎಲ್ ರಿಪೋರ್ಟ್: ವಾರದೊಳಗೆ ಅಂತಿಮ ವರದಿ
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್)ಯು ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕೆಎಂಸಿ ವೈದ್ಯರಿಗೆ ಇಂದು ಸಲ್ಲಿಕೆಯಾಗಿದ್ದು, ಇದರ ಅಂತಿಮ ವರದಿಯು ವಾರದೊಳಗೆ ಪೊಲೀಸರ ಕೈಸೇರಲಿದೆ.
ಜು.19ರಂದು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಶಿರೂರು ಶ್ರೀಗಳ ರಕ್ತದಲ್ಲಿ ವಿಷದ ಅಂಶ ಪತ್ತೆಯಾಗಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಈ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿದ್ದವು. ಈ ಕುರಿತು ಸಹೋದರ ಲಾತವ್ಯ ಆಚಾರ್ಯ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
ಸ್ವಾಮೀಜಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರುವ ಮೊದಲು ಉಳಿದುಕೊಂಡಿದ್ದ ಹಿರಿಯಡ್ಕದಲ್ಲಿರುವ ಶಿರೂರು ಮೂಲಮಠವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಅವರ ಸೇವಿಸಿದ ಆಹಾರ, ಕೋಣೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಅಲ್ಲದೆ ಎರಡು ಬಾರಿ ಮೂಲಮಠಕ್ಕೆ ಆಗಮಿಸಿದ್ದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಹಲವು ಮಾದರಿಗಳ್ನು ಸಂಗ್ರಹಿಸಿ ಕೊಂಡು ಹೋಗಿತ್ತು.
ಈ ಮಧ್ಯೆ ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಯನ್ನು ಮಣಿಪಾಲ ಆಸ್ಪತ್ರೆಯವರು ಜು.30ರಂದು ಪೊಲೀಸರಿಗೆ ಒಪ್ಪಿಸಿದ್ದು, ಇದರಲ್ಲಿ ಅಂತಿಮ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಬಂದ ನಂತರವೇ ನೀಡಲಾಗುವುದು ಎಂದು ಹೇಳಲಾಗಿತ್ತು. ಇದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯ ಮಂಗಳೂರು ಪ್ರಾದೇಶಿಕ ಕಚೇರಿಯ ತಜ್ಞರು ಈ ವರದಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಒಪ್ಪಿಸಿದ್ದಾರೆ.
ಈ ವರದಿಯನ್ನು ಮಣಿಪಾಲ ತಜ್ಞ ವೈದ್ಯರ ತಂಡವು ಕೂಲಂಕಷವಾಗಿ ಅಧ್ಯಯನ ನಡೆಸಲಿದ್ದು, ನಂತರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಯನ್ನು ಪೊಲೀಸರಿಗೆ ಒಪ್ಪಿಸಲಿದ್ದಾರೆ. ಈಗಾಗಲೇ ಪರಿಶೀಲನೆ ಹಂತದಲ್ಲಿರುವ ಅಂತಿಮ ವರದಿಯು ಆ.27 ಅಥವಾ 28ರಂದು ಪೊಲೀಸರ ಕೈಸೇರಲಿದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.