ಮತೀಯ ಶಕ್ತಿಗಳಿಂದ ಶಾಲೆಗಳಿಗೆ ಬಾಂಬ್ ಬೆದರಿಕೆ ರಾಜ್ಯ ಗೃಹ ಇಲಾಖೆಯ ವೈಫಲ್ಯದ ಕೈಗನ್ನಡಿ : ಯಶ್ಪಾಲ್ ಸುವರ್ಣ
ಉಡುಪಿ: ಬೆಂಗಳೂರಿನ 48 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ರವಾನಿಸಿ ಬೆದರಿಕೆ ಹಾಕಿದ ಮತೀಯ ಸಂಘಟನೆಗಳು ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು, ಇದು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯದ ಕೈಗನ್ನಡಿ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಉಗ್ರ ಕೃತ್ಯ ನಡೆದು ಆರೋಪಿಯನ್ನು ಬಂಧಿಸಿದ ಕೂಡಲೇ ದೇ ಆರ್ ಮೈ ಬ್ರದರ್ಸ್ ಎನ್ನುವ ಕಾಂಗ್ರೆಸ್ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮವಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟು ರಾಜ್ಯದ ಜನತೆ ಸಿದ್ದರಾಮಯ್ಯ ಸರಕಾರದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.
ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರದ ಪರೋಕ್ಷ ಬೆಂಬಲದಿಂದ ಮತೀಯ ಶಕ್ತಿಗಳು ಅಟ್ಟಹಾಸ ಮೆರೆಯಲು ಪ್ರಯತ್ನಿಸುತ್ತಿದ್ದು, ಕೇಂದ್ರ ಸರಕಾರ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ತನಿಖಾದಳ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಿ ಉಗ್ರ ಸಂಘಟನೆಯನ್ನು ಮಟ್ಟ ಹಾಕಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.