ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ
ಉಡುಪಿ : ನರೇಂದ್ರ ಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸಬೇಕು ಎಂಬ ಉದ್ದೇಶದಿಂದ ರಾಜಕಿಯೇತರ ನಮೋ ಭಾರತ್ ಎಂಬ ಸಂಘಟನೆಯನ್ನು ದೇಶದಾದ್ಯಂತ ಹುಟ್ಟು ಹಾಕಿದ್ದು, ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಮಾರ್ಚ್ 3 ರಂದು ಸಂಜೆ ಮಲ್ಪೆ ಬೀಚಿನಲ್ಲಿ ಪಾಂಚಜನ್ಯ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಸಂಚಾಲಕರಾದ ಶಶಾಂಕ್ ಶಿವತ್ತಾಯ ಹೇಳಿದರು.
ದೇಶದ ಏಳು ದಶಕಗಳ ರಾಜಕೀಯ ಏಳುಬೀಳುಗಳಲ್ಲಿ ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಜನನಾಯಕರು ಹಲವಾರು ಜನ ಬಂದು ಹೋಗಿದ್ದಾರೆ. ಈ ಮಹಾನ್ ಚೇತನಗಳು ರಾಷ್ಟ್ರ ಸೇವೆಯ ಬದ್ಧತೆ, ಪ್ರಾಮಾಣಿಕತೆ ಮತ್ತು ಶುದ್ಧ ಚಾರಿತ್ರ್ಯದಿಂದಾಗಿ ಇಂದಿಗೂ ಆದರ್ಶ ರಾಜಕಾರಣಕ್ಕೆ ಉದಾಹರಿಸಲ್ಪಡುತ್ತಾರೆ. ನರೇಂದ್ರ ಮೋದಿ ಅವರನ್ನೂ ಕೂಡ ಪಕ್ಷಾತೀತವಾಗಿ ಪ್ರೀತಿಸುವ ಅತಿ ದೊಡ್ಡ ಬಳಗ ದೇಶದಲ್ಲಿದೆ. ಆದರೆ ಈ ಪ್ರೀತಿ ಅಭಿಮಾನಗಳು ನಿರ್ಣಾಯಕ ಕಾಲಘಟ್ಟದಲ್ಲಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಇದಕ್ಕಾಗಿ ಪಕ್ಷಾತೀತ ಅಭಿಯಾನವೊಂದರ ಅಗತ್ಯವಿದ್ದು ನಮೋಭಾರತ್ ಸಂಸ್ಥೆಈ ರೀತಿಯ ಅಭಿಯಾನಗಳನ್ನು ಸಂಘಟಿಸಲಿದೆ. ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕು ಎಂಬ ಆಗ್ರಹದೊಂದಿಗೆ ನಾವು ಹಲವಾರು ಕಾರ್ಯಕ್ರಮಗಳನ್ನು ರಾಜ್ಯವ್ಯಾಪಿ ಆಯೋಜಿಸುತ್ತಿದ್ದೇವೆ.
ಉಡುಪಿಯಲ್ಲಿ ನಮೋ ಭಾರತ್ ಜಿಲ್ಲಾ ಘಟಕ ಅಸ್ವಿತ್ವಕ್ಕೆ ಬಂದಿದ್ದು, ಈ ಘಟಕದ ವತಿಯಿಂದ ಮಲ್ಪೆ ಕಡಲತೀರದಲ್ಲಿ ಭಾನುವಾರ ಪಾಂಚಜನ್ಯ ಎಂಬ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಸಂಜೆ 4 ಗಂಟೆಗೆ ಜಿಲ್ಲೆಯ ವಿವಿಧ ಮೂಲೆಗಳಿಂದ ಆಗಮಿಸುವ ಮೋದಿ ಅಭಿಮಾನಿಗಳಿಂದ ವಡಬಾಂಡೇಶ್ವರದ ವರೆಗೆ ಜಾಥಾ ನಡೆಯಲಿದ್ದು, ಇದೇ ವೇಳೆ ಮಲ್ಪೆಯ ಅದ್ದೂರಿ ವೇದಿಕೆಯಲ್ಲಿ ಸ್ವರಭಾರತಿ ದೇಶಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ. 5 ಗಂಟೆಗೆ ವಡಬಾಂಢೇಶ್ವರದಿಂದ ಮಲ್ಪೆ ಕಡಲ ತೀರದವರೆಗೆ ಅತಿಥಿಗಳ ಜೊತೆ ಪಾದಯಾತ್ರೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಕೇಂದ್ರದ ಜವಳಿ ಖಾತೆಯ ಸಚಿವರಾದ ಸ್ಮ್ರತಿ ಇರಾನಿ ಮತ್ತು ಸಂಸದೆ ಮೀನಾಕ್ಷಿ ಲೇಖಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಮೂಲೆಗಳಿಂದ ಸುಮಾರು 20 ಸಾವಿರ ಮೋದಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾರ್ತಿಕ್ ಕುಂದರ್, ಅವಿನಾಶ್ ಶೆಟ್ಟಿ, ಚೈತ್ರಾ ಕೋಟ, ಸನ್ನಿತ್ ಪೂಜಾರಿ, ನರಸಿಂಹ ಉಪಸ್ಥಿತರಿದ್ದರು.