Home Mangalorean News Kannada News ಮತ್ಸ್ಯಕ್ಷಾಮದಿಂದ ಕಂಗಾಲಾಗಿರುವ ಮೀನುಗಾರರಿಗೆ ಸರಕಾರ ತುರ್ತು ಪರಿಹಾರ ನೀಡಲಿ: ವಿಶ್ವಾಸ್ ವಿ. ಅಮೀನ್

ಮತ್ಸ್ಯಕ್ಷಾಮದಿಂದ ಕಂಗಾಲಾಗಿರುವ ಮೀನುಗಾರರಿಗೆ ಸರಕಾರ ತುರ್ತು ಪರಿಹಾರ ನೀಡಲಿ: ವಿಶ್ವಾಸ್ ವಿ. ಅಮೀನ್

Spread the love

ಮತ್ಸ್ಯಕ್ಷಾಮದಿಂದ ಕಂಗಾಲಾಗಿರುವ ಮೀನುಗಾರರಿಗೆ ಸರಕಾರ ತುರ್ತು ಪರಿಹಾರ ನೀಡಲಿ: ವಿಶ್ವಾಸ್ ವಿ. ಅಮೀನ್

ಉಡುಪಿ: ಹವಾಮಾನ ವೈಪರೀತ್ಯದಿಂದಾಗಿ ಸುಮಾರು 7 ತಿಂಗಳಿಂದ ಉಡುಪಿ ಜಿಲ್ಲೆಯ ಮೀನುಗಾರರು ಮೀನುಗಾರಿಕೆಯಿಲ್ಲದೆ ಕಂಗಾಲಾಗಿದ್ದು ಈ ವರ್ಷ ಎದುರಾದ ಮತ್ಸ್ಯಕ್ಷಾಮದಿಂದಾಗಿ ಮೀನುಗಾರರ ಬದುಕು ಚಿಂತಾಜನಕವಾಗಿದೆ. ಈ ಬಗ್ಗೆ ಸರಕಾರ ತಕ್ಷಣ ಸಮೀಕ್ಷೆ ನಡೆಸಿ ಎಲ್ಲಾ ಮೀನುಗಾರರಿಗೆ ತುರ್ತು ಪರಿಹಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್ ಆಗ್ರಹಿಸಿದ್ದಾರೆ.

ಶುಕ್ರವಾರ ಕಾಪು ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ನೇ ವರ್ಷದಲ್ಲಿ ಮೀನುಗಾರಿಕೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ಕಳೆದ 7 ತಿಂಗಳಿಂದ ಯಾವುದೇ ಮೀನುಗಾರಿಕೆ ನಡೆಯದೆ ಇರುವ ಕಾರಣ ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ಸಾವಿರಾರು ಕುಟುಂಬಗಳು ಕಂಗಾಲಾಗಿವೆ. ಉದರ ಪೋಷಣೆ ನಿಮಿತ್ತ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಬಡ ಸಾಂಪ್ರದಾಯಿಕ ಮೀನುಗಾರರು ಕಡಲನ್ನೇ ನಂಬಿ ಜೀವನ ನಡೆಸುವವರು. ಇದೀಗ ಮತ್ಸ್ಯಕ್ಷಾಮದಿಂದಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಶೋಚನೀಯ ಪರಿಸ್ಥಿತಿಗೆ ಮೀನುಗಾರರು ತಲುಪಿದ್ದಾರೆ. ಮೀನುಗಾರಿಕೆಯಿಲ್ಲದ ಕಾರಣ ಯಾವುದೇ ಆದಾಯವಿಲ್ಲದೆ ಸಾಲದ ಹೊರೆಯಿಂದಾಗಿ ಮೀನುಗಾರರು ಧಿಕ್ಕಾಪಾಲಾಗುತ್ತಿದ್ದಾರೆ. ಇಂಥಹ ಸೂಕ್ಷ್ಮ ಪರಿಸ್ಥಿಯಲ್ಲಿ ಬಡ ಮೀನುಗಾರರ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಮತ್ತು ಕೇಂದ್ರ ಸರಕಾರ ಶೀಘ್ರ ಸ್ಪಂದಿಸಬೇಕು ಎಂದು ಅವರು ಹೇಳಿದರು.

ತಮ್ಮ ಜೀವದ ಹಂಗನ್ನು ತೊರೆದು ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯುವ ಮೀನುಗಾರರಿಗೆ ಈ ವರ್ಷ ಹವಾಮಾನ ವೈಪರೀತ್ಯದಿಂದಾಗಿ ಕೇವಲ ಎರಡು ದಿನದ ಮೀನುಗಾರಿಕೆ ಮಾಡಲು ಮಾತ್ರ ಸಾಧ್ಯವಾಯಿತು. ಇತ್ತೀಚೆಗೆ ಸಮುದ್ರಕ್ಕೆ ಇಳಿದಿದ್ದ ಪರ್ಸೀನ್ ಬೋಟುಗಳು ಮತ್ಸ್ಯಕ್ಷಾಮ ಎದುರಿಸಿ ವಾಪಾಸು ಬಂದಿದ್ದು ಮರಳಿ ಸಮುದ್ರಕ್ಕೆ ಇಳಿಯದೆ ಲಂಗಾರು ಹಾಕಿವೆ. ಸಾಂಪ್ರದಾಯಿಕ ಸೇರಿದಂತೆ ಯಾಂತ್ರೀಕೃತ ಮೀನುಗಾರಿಕೆಯನ್ನೇ ಅವಲಂಬಿತರಾಗಿದ್ದ ಮೀನುಗಾರರಿಗೆ ಯಾವುದೇ ಆದಾಯವಿಲ್ಲದಿದ್ದು ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಾಗಿದೆ.

ಮತ್ಸ್ಯಕ್ಷಾಮದ ಮೇಲೆ ಜಿಎಸ್‍ಟಿ ಬರೆ:

ಮೀನುಗಾರಿಕೆಯೂ ಒಂದು ಬಗೆಯ ಕೃಷಿಯಾಗಿದ್ದು, ಮೀನುಗಾರಿಕೆಗೂ ಕೃಷಿಯಂತೆಯೇ ಸರಕಾರ ಯಾವುದೇ ರೀತಿಯ ಕರ ವಿಧಿಸುತ್ತಿರಲಿಲ್ಲ. ಇತ್ತೀಚೆಗೆ ಫಿಶ್ ಮಿಲ್‍ಗಳ ಮೇಲೆ ಕೇಂದ್ರ ಸರಕಾರ ಜಿಎಸ್‍ಟಿ ವಿಧಿಸಿರುವುದರಿಂದಾಗಿ ಮೀನುಗಾರಿಕಾ ಋತುವಿನಲ್ಲೇ ಫಿಶ್ ಮಿಲ್‍ಗಳು ಅದನ್ನು ಪ್ರತಿಭಟಿಸಿ ದೇಶಾದ್ಯಂತ ಎಲ್ಲಾ ಫಿಶ್ ಮಿಲ್‍ಗಳನ್ನು ಬಂದ್ ಮಾಡಿತ್ತು. ಇದರಿಂದಾಗಿ ಅಲ್ಪಸ್ವಲ್ಪ ಮೀನುಗಾರಿಕೆ ನಡೆದಿದ್ದ ಬೋಟುಗಳೂ ತಾವು ಹಿಡಿದ ಮೀನುಗಳನ್ನು ಡಂಪ್ ಮಾಡುವ ಅನಿವಾರ್ಯತೆಗೆ ಒಳಗಾಗಬೇಕಾಯಿತು. ಹವಾಮಾನ ವೈಪರೀತ್ಯದ ಜತೆಜತೆಗೆ ಜಿಎಸ್‍ಟಿ ಬರೆ ಮೀನುಗಾರರ ಪರಿಸ್ಥಿತಿಯನ್ನು ಮತ್ತಷ್ಟು ಕ್ಷೀಣಿಸಿದ್ದು ಮೀನುಗಾರಿಕೆಗೆ ತೀವ್ರ ತೊಡಕು ಉಂಟಾಗಿದೆ.

ಮತ್ಸ್ಯ ಬರ ಎಂದು ಘೋಷಿಸಿ:

ಕೃಷಿಗೆ ಬರ ಉಂಟಾದಾಗ ರೈತರಿಗೆ ಯಾವ ರೀತಿ ಬರ ಪೀಡಿತ ಪ್ರದೇಶ ಎಂದು ಘೋಷಿಸಿ ತುರ್ತು ಬರ ಪರಿಹಾರಗಳನ್ನು ವಿತರಿಸಲಾಗುತ್ತದೆಯೋ ಅದೇ ರೀತಿ ಈಗ ಸಮುದ್ರದಲ್ಲಿ ಕಂಡು ಬಂದಿರುವ ಮತ್ಸ್ಯಕ್ಷಾಮವನ್ನು “ಮತ್ಸ್ಯ ಬರ” ಎಂದು ಘೋಷಿಸಿ ಬಡ ಮೀನುಗಾರರಿಗೆ ಬರ ಪರಿಹಾರಗಳನ್ನು ಸರಕಾರ ಘೋಷಿಸಬೇಕು. ಮೀನುಗಾರಿಕಾ ಇಲಾಖಾಧಿಕಾರಿಗಳು ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ತುರ್ತು ಸ್ಪಂದನೆಗೆ ಮುಂದಾಗಬೇಕು.

ಸಾಲ ಮನ್ನಾದ ಗೊಂದಲ:

ಇತ್ತೀಚೆಗೆ ರಾಜ್ಯ ಸರಕಾರ ಮೀನುಗಾರಿಕಾ ಸಲ ಮನ್ನಾ ಘೋಷಿಸಿದ್ದು, ಇದರಲ್ಲಿ ಹಲವರು ಗೊಂದಲಗಳು ಕಾಣ ಸಿಗುತ್ತಿದೆ. ಜಿಲ್ಲೆಯ ಬಹುತೇಕ ಮೀನುಗಾರರು ಮೀನುಗಾರಿಕಾ ಸಹಕಾರಿ ಸಂಘದ ಮೂಲಕ ಸಾಲಗಳನ್ನು ಪಡೆದುಕೊಂಡಿದ್ದು, ಮೀನುಗಾರಿಕಾ ಸೊಸೈಟಿಗಳು ಮಾತ್ರ ತಮ್ಮಲ್ಲಿರುವ ಸಾಲಗಳು ಮನ್ನಾ ಆಗುತ್ತಿಲ್ಲ ಎಂದು ಹೇಳುತ್ತಿವೆ. ಅಲ್ಲದೆ ಸರಕಾರವು ಕೇವಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಲಾಗಿರುವ ಸಾಲಗಳನ್ನು ಮಾತ್ರ ಮನ್ನಾ ಮಾಡುತ್ತಿವೆ ಎಂದು ತಿಳಿದು ಬರುತ್ತಿವೆ. ಇದರಿಂದಾಗಿ ಮೀನುಗಾರರಲ್ಲಿ ಗೊಂದಲ ಉಂಟಾಗಿದ್ದು ಸಾಲ ಮನ್ನಾ ಎಂಬ ಘೋಷಣೆ ಕೇವಲ ಪ್ರಹಸನ ಎಂಬಂತೆ ಭಾಸವಾಗುತ್ತಿದೆ.

ಅದಾನಿ ಯುಪಿಸಿಎಲ್‍ನ ಪರಿಹಾರ ವಿತರಿಸಿ:

ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿರುವ ಅದಾನಿ ಯುಪಿಸಿಎಲ್‍ನ ಸಮುದ್ರಕ್ಕೆ ಹಾಕಲಾದ ಪೈಪ್‍ಲೈನಿಂದಾಗಿ ಮೀನುಗಾರಿಕೆಗೆ ಉಂಟಾದ ತೊಂದರೆಗಳನ್ನು ಮನಗಂಡು ವಿನಯಕುಮಾರ್ ಸೊರಕೆ ಶಾಸಕರಾಗಿದ್ದು, ಪ್ರಮೋದ್ ಮಧ್ವರಾಜ್ ರವರು ಉಸ್ತುವಾರಿ ಸಚಿವರಾಗಿದ್ದ ವೇಳೆ ಸುಮಾರು 3.26 ಕೋಟಿ ರೂಪಾಯಿಯನ್ನು ನಾಡದೋಣಿ ಮೀನುಗಾರರಿಗೆ ವಿತರಿಸಲಾಗಿತ್ತು. ಆ ಬಳಿಕ ಸುಮಾರು 5 ಕೋಟಿ ರೂಪಾಯಿ ಪರಿಹಾರವನ್ನು ಉಳಿದ ಮೀನುಗಾರರಿಗೆ ವಿತರಿಸುವ ಸಲುವಾಗಿ ಮಂಜೂರು ಮಾಡಲಾಗಿತ್ತು. ಪ್ರಸ್ತುತ ಶಾಸಕರಾಗಿರುವ ಲಾಲಾಜಿ ಮೆಂಡನ್ ಮತ್ತು ಮೀನುಗಾರಿಕಾ ಸಚಿವರಾಗಿರುವ ಕೋಟ ಶ್ರೀನಿವಾಸ್ ಪೂಜಾರಿಯವರು ಮುತುವರ್ಜಿ ವಹಿಸಿ ಈ ಪರಿಹಾರ ಮೊತ್ತವನ್ನು ತಕ್ಷಣ ವಿತರಿಸುವಂತೆ ಮಾಡಿದರೆ ಈ ಕಷ್ಟದ ಪರಿಸ್ತಿತಿಯಲ್ಲಿ ಈ ಭಾಗದ ಜನರಿಗೆ ಜೀವಸೆಲೆಯಾಗಲಿದೆ.


Spread the love

Exit mobile version