ಮತ ಎಣಿಕೆ ಕೇಂದ್ರದಲ್ಲಿ ಸೂಚನೆ ಪಾಲಿಸಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ : ಮೇ 23 ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ, ಮತ ಎಣಿಕೆ ಏಜೆಂಟ್ಗಳು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ವಿವಿಧ ರಾಜಕೀಯ ಪಕ್ಷಗಳ ಏಜೆಂಟ್ರವರ ಸಭೆಯಲ್ಲಿ ಮಾತನಾಡಿದರು.
ಮತ ಎಣಿಕೆ ದಿನ, ಮತ ಎಣಿಕೆ ಏಜೆಂಟ್ಗಳು ಬೆಳಗ್ಗೆ 6.30 ರಿಂದ 7 ಗಂಟೆಯವರೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು, ಚುನಾವಣಾಧಿಕಾರಿ ವಿತರಿಸಿದ ಗುರುತಿನ ಚೀಟಿ ಇಲ್ಲವಾದಲ್ಲಿ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ, ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದ್ದು, ಯಾವ ಮೇಜಿನ ಏಜೆಂಟ್ ಆಗಿ ನೇಮಕಗೊಳಿಸಿದೆಯೋ ಅದೇ ಮೇಜಿನ ಬಳಿ ಬೆಳಗ್ಗೆ 7.30 ರೊಳಗೆ ಉಪಸ್ಥಿತರಿರಬೇಕು, ಮತ ಎಣಿಕೆ ಕೇಂದ್ರದಲ್ಲಿ ಅನಗತ್ಯವಾಗಿ ಅತ್ತಿಂದಿತ್ತ ತಿರುಗಾಡಬಾರದು ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಎಣಿಕೆ ಕೊಠಡಿಯಿಂದ ಹೊರಗೆ ಹೋಗುವಂತಿಲ್ಲ, ಚುನಾವಣಾ ಫಲಿತಾಂಶ ಘೊಷಣೆಯಾದ ನಂತರವೇ ಕೊಠಡಿಯಿಂದ ಹೊರಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಅಂಚೆ ಮತಪತ್ರಗಳ ಎಣಿಕೆಯನ್ನು ಬೆಳಗ್ಗೆ 8 ಗಂಟೆಗೆ ಸರಿಯಾಗಿ, ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗುವುದು, ಅಂಚೆ ಮತಪತ್ರ ಎಣಿಕೆ ಮೇಜಿಗೆ ನೇಮಕಗೊಂಡ ಏಜೆಂಟರಿಗೆ ಮಾತ್ರ ಆ ಕೊಠಡಿಗೆ ಪ್ರವೇಶವಿದ್ದು, ಚುನಾವಣಾ ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್ಗೆ ಮಾತ್ರ ಎಲ್ಲಾ ಮತ ಎಣಿಕೆ ಕೊಠಡಿಗಳಿಗೆ ಪ್ರವೇಶಿಸಿ, ಪರಿಶೀಲಿಸಲು ಅವಕಾಶವಿದೆ ಉಳಿದ ಏಜೆಂಟರಿಗೆ ಇಲ್ಲ ಎಂದು ತಿಳಿಸಿದ ಡಿಸಿ, ಅಂಚೆ ಮತಪತ್ರ ಎಣಿಕೆ ಆರಂಭವಾಗಿ 30 ನಿಮಿಷಗಳ ನಂತರ ಮತಯಂತ್ರಗಳ ಎಣಿಕೆ ವಿಧಾನಸಭಾ ಕ್ಷೇತ್ರವಾರು ಕೊಠಡಿಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದರು.
ಅಂತಿಮ ಸುತ್ತಿನ ಮತ ಎಣಿಕೆ ಮುಗಿದ ಕೂಡಲೇ ಪ್ರತೀ ವಿಧಾನಸಭಾ ಕ್ಷೇತ್ರಗಳ 5 ಮತಗಟ್ಟೆಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ, ಈ 5 ಮತಗಟ್ಟೆಗಳ ವಿವಿ ಪ್ಯಾಟ್ ಗಳಲ್ಲಿನ ಪೇಪರ್ ಸ್ಲಿಪ್ಗಳನ್ನು ಎಣಿಕೆ ಮಾಡಲಾಗುತ್ತದೆ, ತದ ನಂತರ ಚುನಾವಣಾ ವೀಕ್ಷಕರ ಅನುಮೋದನೆ ಪಡೆದು ಫಲಿತಾಂಶ ಘೋಷಿಸಲಾಗುವುದು ಎಂದು ಡಿಸಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.