ಮದ್ಯವ್ಯಸನಿಗಳನ್ನು ಪರಿವರ್ತನೆಯೊಂದಿಗೆ  ಸಮಾಜದ ಮುಖ್ಯ ವಾಹಿನಿಗೆ ತರುವ  ಕಾರ್ಯ ಸ್ತುತ್ಯಾರ್ಹ  : ಕೋಟ ಶ್ರೀನಿವಾಸ ಪೂಜಾರಿ  

Spread the love

ಮದ್ಯವ್ಯಸನಿಗಳನ್ನು ಪರಿವರ್ತನೆಯೊಂದಿಗೆ  ಸಮಾಜದ ಮುಖ್ಯ ವಾಹಿನಿಗೆ ತರುವ  ಕಾರ್ಯ ಸ್ತುತ್ಯಾರ್ಹ  : ಕೋಟ ಶ್ರೀನಿವಾಸ ಪೂಜಾರಿ  

 ಉಜಿರೆ: ರಾಜ್ಯದಲ್ಲಿ 10,700 ಬಾರ್‍ಗಳಿದ್ದು ಸರ್ಕಾರಕ್ಕೆ ವಾರ್ಷಿಕ ಹದಿನೆಂಟು ಸಾವಿರ ಕೋಟಿ ರೂ. ಆದಾಯ ಬರುತ್ತದೆ. ಆದರೆ, ಮದ್ಯ ವ್ಯಸನಿಗಳು ಮಾಡುವ ಅನಾಹುತ, ಗೊಂದಲ, ಸಾಮಾಜಿಕ ಸಮಸ್ಯೆಗಳನ್ನು ತಡೆಗಟ್ಟಲು ಇದಕ್ಕಿಂತ ಶೇ. ಹತ್ತರಷ್ಟು ಹೆಚ್ಚು ವೆಚ್ಚವಾಗುತ್ತಿದೆ. ಆದುದರಿಂದ ಹೊಸ ಬಾರ್‍ಗಳಿಗೆ ಪರವಾನಿಗೆ ನೀಡುವಾಗ ಆತ್ಮಾವಲೋಕನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ ಮದ್ಯ ವ್ಯಸನ ಮುಕ್ತ ಸಾಧಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ ಸಂಯಮ ಮಂಡಳಿ ಮೂಲಕ ಸರ್ಕಾರವು ಮದ್ಯ ವ್ಯಸನಿಗಳಿಂದ ಆಗುವ ಹಾನಿ ಹಾಗೂ ಗೊಂದಲದ ಸಮಸ್ಯೆ ನಿವಾರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಧರ್ಮಸ್ಥಳದ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಮದ್ಯ ವರ್ಜನ ಶಿಬಿರಗಳ ಮೂಲಕ ಮಾನಸಿಕ ಪರಿವರ್ತನೆ ಮೂಲಕ ಮದ್ಯ ವ್ಯಸನಿಗಳನ್ನು ಪಾನ ಮುಕ್ತರಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಕಾಯಕ ಶ್ಲಾಘನೀಯವಾಗಿದೆ ಎಂದು ಹೇಳಿ ಸರ್ಕಾರದ ಪರವಾಗಿ ಸಚಿವರು ಹೆಗ್ಗಡೆಯವರನ್ನು ಅಭಿನಂದಿಸಿದರು.

ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಬದ್ಧತೆ, ಜವಾಬ್ದಾರಿ, ಪರಿಶ್ರಮ ಹಗೂ ನಿರಂತರ ಪ್ರಯತ್ನದ ಮೂಲಕ ಸಭ್ಯ, ಸುಸಂಸ್ಕøತ, ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರ ಕೂಡಾ ಮದ್ಯಪಾನ ಸಂಯಮ ಮಂಡಳಿ ಮೂಲಕ ಜನಜಾಗೃತಿ ವೇದಿಕೆಯ ಚಟುವಟಿಕೆಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ವ್ಯಸನಮುಕ್ತರ ಪರವಾಗಿ ಬೈಂದೂರಿನ ಶೇಖರ ಶೆಟ್ಟಿ ಮತ್ತು ನೇತ್ರಾವತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಮದ್ಯ ವ್ಯಸನಿಗಳು ಬದುಕಿದ್ದರೂ ಸತ್ತ ಹಾಗೆ. ಕುಟುಂಬದಲ್ಲಿ, ಸಮಾಜದಲ್ಲಿ ಅವಮಾನ, ಅಪಹಾಸ್ಯ, ಕೀಳರಿಮೆಗೆ ಒಳಗಾಗುತ್ತಾರೆ. ವ್ಯಸನ ಮುಕ್ತರಾದವರು ದ್ವಿಜರಾಗಿ ಮರುಜನ್ಮ ಪಡೆದಿದ್ದು ತಮ್ಮ ಸಂಕಲ್ಪಕ್ಕೆ ವಿಕಲ್ಪ ಬಾರದಂತೆ ಎಚ್ಚರಿಕೆಯಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿ, ಗೌರವದ ಹಾಗೂ ಅಭಿಮಾನದ, ಸಂತೃಪ್ತಿಯ ಜೀವನ ನಡೆಸುತ್ತಿರುವ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ರೋಹಿಣಿ, ಕೆ. ಮಾತನಾಡಿ, ಚಟ್ಟಕ್ಕೆ ಏರಿಸುವ ಚಟಗಳು ಯಾರಿಗೂ ಬೇಡ. ವ್ಯಸನ ಮುಕ್ತರು ಪತ್ನಿ, ಮಕ್ಕಳು ಹಾಗೂ ಕುಟುಂಬದವರೊಂದಿಗೆ ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಜನಜಾಗೃತಿ ವೇದಿಕೆಗೆ ಮದ್ಯ ವರ್ಜನ ಶಿಬಿರ ಆಯೋಜಿಸಲು 9,65,000/- ರೂ. ನ ಚೆಕನ್ನು ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿಗೆ ಹಸ್ತಾಂತರಿಸಿದರು.

ವರ್ಷದಲ್ಲಿ 165 ಮದ್ಯವರ್ಜನ ಶಿಬಿರಗಳನ್ನು ಯೋಜಿಸಲು ಜನಜಾಗೃತಿ ವೇದಿಕೆಗೆ ಮದ್ಯಪಾನ ಸಂಯಮ ಮಂಡಳಿಯಿಂದ ಇಪ್ಪತ್ತು ಲಕ್ಷ ರೂ. ಅನುದಾನ ಮಂಜೂರು ಮಾಡಿರುವುದಾಗಿ ಅವರು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನವೇ ಅತಿ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ಮದ್ಯವ್ಯಸನಿಗಳು ಪಾಪಿಗಳಲ್ಲ, ಮೋಸ ಮಾಡುವವರಲ್ಲ. ವ್ಯಸನ ಮುಕ್ತರಾದವರು ಧರ್ಮಸ್ಥಳದಲ್ಲಿ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದು ಶುದ್ಧೀಕರಣಗೊಂಡು ಪವಿತ್ರಾತ್ಮರಾಗಿದ್ದೀರಿ. ದೃಢಸಂಕಲ್ಪದಿಂದ ಮತ್ತೆ ಎಂದೂ ಮದ್ಯ ವ್ಯಸನಕ್ಕೆ ಬಲಿಯಾಗದೆ ಇತರ ವ್ಯಸನಿಗಳನ್ನೂ ಪರಿವರ್ತನೆ ಮಾಡಿ ಸಾರ್ಥಕ ಜೀವನ ಮಾಡುವಂತೆ ಪ್ರೇರಣೆ ನೀಡಬೇಕು.

ಮದ್ಯಪಾನದಿಂದ ವ್ಯಕ್ತಿತ್ವ ನಾಶವಾಗುತ್ತದೆ. ವ್ಯಸನ ಮುಕ್ತರಾದಾಗ ಆಯುಷ್ಯ, ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಸಮಾಜದಲ್ಲಿ ಗೌರವ ಸಿಗುತ್ತದೆ. ಸಾಂಸಾರಿಕ ನೆಮ್ಮದಿಯೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸೌಹಾರ್ದಯುತ ಕೌಟುಂಬಿಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದ 38 ತಾಲ್ಲೂಕುಗಳಿಂದ 3,559 ಮದ್ಯವ್ಯಸನ ಮುಕ್ತರು ಸಮಾವೇಶದಲ್ಲಿ ಭಾಗವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷರಾದ ದೇವದಾಸ್ ಹೆಬ್ಬಾರ್, ತಾಲ್ಲೂಕು ಅಧ್ಯಕ್ಷರಾದ ಕೆ. ಪ್ರತಾಪಸಿಂಹ ನಾಯಕ್, ಶಾರದಾ ರೈ, ವಸಂತ ಸಾಲ್ಯಾನ್ ಉಪಸ್ಥಿತರಿದ್ದರು. ವಿವೇಕ್ ವಿ. ಪಾೈಸ್ ಸ್ವಾಗತಿಸಿದರು. ಬೆಂಗಳೂರಿನ ವಿ. ರಾಮಸ್ವಾಮಿ ಧನ್ಯವಾದವಿತ್ತರು.


Spread the love