ಮಧ್ಯಪ್ರದೇಶ | ಕ್ರೈಸ್ತ ಧರ್ಮಗುರು ಮೇಲೆ ದಾಳಿ : ಆಕ್ರೋಶದ ಬಳಿಕ ಎಫ್‍ಐಆರ್ ದಾಖಲು
ಭೋಪಾಲ್: ಕೇರಳದ ಇಬ್ಬರು ಕ್ರಿಶ್ಚಿಯನ್ ಧರ್ಮಗುರುಗಳು ಸೇರಿದಂತೆ ಮೂರು ಮಂದಿಯ ಮೇಲೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ದಾಳಿ ನಡೆದ ನಾಲ್ಕು ದಿನಗಳ ಬಳಿಕ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೊಳಗಾದ ಒಬ್ಬ ಧರ್ಮಗುರು 75 ವರ್ಷ ವಯಸ್ಸಿನವರು. ಪೊಲೀಸರು ಪ್ರಕರಣ ದಾಖಲಿಸಲು ವಿಳಂಬವಾದ ಬಗ್ಗೆ ಕ್ರಿಶ್ಚಿಯನ್ ಸಮುದಾಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ನ್ಯಾಯಕ್ಕೆ ಆಗ್ರಹಿಸಿ ಕ್ರೈಸ್ತ ಸಂಘಟನೆಗಳು ಬೀದಿಗಿಳಿದಿದ್ದವು. ಎಲ್ಲ ಸಂತ್ರಸ್ತರು ಜಬಲ್ಪುರ ಧರ್ಮಪ್ರಾಂತ್ಯಕ್ಕೆ ಸೇರಿದವರು. ಜಬಲ್ಪುರ ಧರ್ಮಪ್ರಾಂತ್ಯದ ವಿಕಾರ್, ಸಂತ ಅಲೋಶಿಯಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕ ಹಾಗೂ ಮಾಜಿ ಪ್ರಾಚಾರ್ಯ ಫಾದರ್ ಡೇವಿಸ್ ಜಾರ್ಜ್, ಧರ್ಮಪ್ರಾಂತ್ಯದ ಫಾದರ್ ಜಾರ್ಜ್ ಥಾಮಸ್ ಅವರ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಮಾ.31ರಂದು ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ್ದರು.
ಈ ದಾಳಿಗೆ ಕಾರಣವಾದ ಅಂಶಗಳ ಬಗ್ಗೆ ಸಂತ ಅಲೋಶಿಯಸ್ ಸಂಸ್ಥೆಯ ಪ್ರಾಚಾರ್ಯ ಫಾದರ್ ಬೆನ್ ಅಂಟೋನ್ ವಿವರ ನೀಡಿ, ಕ್ರೈಸ್ತ ಯಾತ್ರಿಗಳ ಒಂದು ಗುಂಪು ಜಬಲ್ಪುರದಿಂದ 90 ಕಿಲೋಮೀಟರ್ ದೂರದ ಮಂಡ್ಲಾ ಜಿಲ್ಲೆಯಿಂದ ಬಂದಿದ್ದು, ಪೋಪ್ ಘೋಷಿಸಿದ ಜ್ಯೂಬಿಲಿ ವರ್ಷದ ತೀರ್ಥಯಾತ್ರೆಯ ಭಾಗವಾಗಿ ಆಗಮಿಸಿತ್ತು ಎಂದು ಹೇಳಿದ್ದಾರೆ.
“ಈ ವರ್ಷ ಕ್ಯಾಥೋಲಿಕ್ ಸಮುದಾಯದವರು ಜ್ಯೂಬಿಲಿ ವರ್ಷವನ್ನು ಆಚರಿಸುತ್ತಿದ್ದಾರೆ. ಆದ್ದರಿಂದ ಪ್ರತಿ ಧರ್ಮಪ್ರಾಂತ್ಯಗಳು ಕೆಲ ಯಾತ್ರಾಸ್ಥಳಗಳನ್ನು ಸಂದರ್ಶಿಸಿ ಪ್ರಾರ್ಥನೆ ಸಲ್ಲಿಸುವಂತೆ ಎಲ್ಲ ಬಿಷಪ್‍ಗಳಿಗೆ ಪೋಪ್ ಸೂಚನೆ ನೀಡಿದ್ದಾರೆ. ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಮತ್ತು ಧರ್ಮಗುರು ಸೇರಿದಂತೆ ಸುಮಾರು 50 ಮಂದಿ ಮಾಂಡ್ಲಾದಿಂದ ಆಗಮಿಸಿದ್ದರು. ಇವರು ಮೂರನೇ ತಲೆಮಾರಿನ ಕ್ಯಾಥೋಲಿಕ್ ಧರ್ಮದವರಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲೇ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು” ಎಂದು ವಿವರ ನೀಡಿದ್ದಾರೆ.
ಈ ಗುಂಪು ಮೊದಲ ಚರ್ಚ್‍ಗೆ ಭೇಟಿ ನೀಡಿದಾಗ ಅಪರಿಚಿತ ಕಿಡಿಗೇಡಿಗಳಿಂದ ಪ್ರತಿರೋಧ ಎದುರಾಯಿತು. ಆದರೆ ಕ್ಯಾಥೋಲಿಕ್ ಜನರು ಧರ್ಮಗುರುಗಳ ಪರವಾಗಿ ನಿಂತು ಅವರಿಗೆ ರಕ್ಷಣೆ ಒದಗಿಸಿದರು. ಈ ಗುಂಪು ಮತ್ತೊಂದು ಚರ್ಚ್‍ಗೆ ತೆರಳುತ್ತಿದ್ದಾಗ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ಬಸ್ ಮೇಲೆ ದಾಳಿ ಮಾಡಿದರು. ಗುಂಪನ್ನು ನೋಡಿ ಬಸ್ ಚಾಲಕ ಪರಾರಿಯಾದ. ಬಸ್ಸಿನಲ್ಲಿದ್ದ ಯಾತ್ರಾರ್ಥಿಗಳನ್ನು ಅಪಹರಿಸಿ ಪೊಲೀಸ್ ಠಾಣೆಗೆ ಒಯ್ಯಲಾಗಿತ್ತು ಎಂದು ಅಂಟೋನ್ ವಿವರಿಸಿದ್ದಾರೆ.
ಧರ್ಮಗುರುಗಳ ಮೇಲೆ ಧಾರ್ಮಿಕ ಮತಾಂತರದ ಆರೋಪ ಹೊರಿಸಿ ದೂರು ನೀಡಲಾಗಿದ್ದು, ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಈ ವೇಳೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ್ದರು.