ಮನಪಾ ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್ ಅವಿರೋಧ ಆಯ್ಕೆ

Spread the love

ಮನಪಾ ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್ ಅವಿರೋಧ ಆಯ್ಕೆ
 

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಆಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ಮನಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಉಪಮೇಯರ್ ಆಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 58ರ ಸದಸ್ಯೆ ಭಾನುಮತಿ ಪಿ.ಎಸ್. ಆಯ್ಕೆಯಾಗಿದ್ದಾರೆ.

ಗುರುವಾರ ಮಂಗಳೂರು ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯಿತು. ಮೇಯರ್ ಹುದ್ದೆಗೆ “ಎಸ್ ಸಿ” ಮೀಸಲಾತಿಯಡಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲದ ಕಾರಣದಿಂದ ಮೇಯರ್ ಆಯ್ಕೆ ಅವಿರೋಧವಾಗಿ ನಡೆಯಿತು.

ಪಾಲಿಕೆಯಲ್ಲಿ ಪ್ರಸಕ್ತ ಬಿಜೆಪಿ ಆಡಳಿತ ಮುಂದಿನ ವರ್ಷದ ಫೆಬ್ರವರಿ 27ರವರೆಗೆ ಇರುವ ಕಾರಣದಿಂದ ಸುಮಾರು ಐದೂವರೆ ತಿಂಗಳು ಮಾತ್ರ ಮೇಯರ್ , ಉಪಮೇಯರ್ ಅಧಿಕಾರಾವಧಿ ಇರಲಿದೆ. ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್. ಪಾಲಿಕೆಯ ಮಂಗಳ ಸಭಾಂಗಣ ದಲ್ಲಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.

ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14, ಎಸ್ಡಿಪಿಐ ಇಬ್ಬರು ಸದಸ್ಯ ಬಲವನ್ನು ಹೊಂದಿದೆ. ಚುನಾವಣೆಯಲ್ಲಿ ಸಂಸದ, ಶಾಸಕರು ಸೇರಿ 65 ಮಂದಿ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ.

ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಉಪಸ್ಥಿತರಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಶಾಸಕರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಗೈರಾಗಿದ್ದರು.

ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪಾಲಿಕೆ ಆಯುಕ್ತ ಆನಂದ್ ಉಪಸ್ಥಿತರಿದ್ದರು.

ಚುನಾವಣೆ ಪ್ರಕ್ರಿಯೆ 12 ಗಂಟೆಗೆ ಆರಂಭಗೊಂಡಿದ್ದು, ಕಾಂಗ್ರೆಸ್ ನ ಇಬ್ಬರು ಶಾಸಕರು, ಎಸ್ ಡಿ ಪಿಐ ಸದಸ್ಯರಾದ ಸಂಶಾದ್ ಅಬೂಬಕ್ಕರ್ ಹಾಗೂ ಮುನೀಬ್ ಬೆಂಗ್ರೆ ಆ ಸಮಯದಲ್ಲಿ ಹಾಜರಿರಲಿಲ್ಲ. ಹಾಗಾಗಿ ಚುನಾವಣೆಗೆ 61 ಮತದಾರರ ಹಾಜರಾತಿಯನ್ನು ಚುನಾವಣಾ ಅಧಿಕಾರಿ ಪ್ರಕಟಿಸಿದರು.

ಸದಸ್ಯೆ ಸಂಶಾದ್ ಅಬೂಬಕ್ಕರ್ 12.11ರ ವೇಳೆಗೆ ಸಭಾಂಗಣಕ್ಕೆ ಹಾಜರಾಗಿದ್ದು, ಉಪ ಮೇಯರ್ ಚುನಾವಣೆ ಸಂದರ್ಭದಲ್ಲಿ ತಟಸ್ಥ ಸದಸ್ಯರ ಪರಿಗಣನೆಯ ವೇಳೆ ಸಂಶಾದ್ ಅಬೂಬಕ್ಕರ್ ಕೈ ಎತ್ತಿದಾಗ ಅವರ ಮತವನ್ನು ದಾಖಲಿಸಲಾಯಿತು.

ಉಪಮೇಯರ್ ಸ್ಥಾನಕ್ಕೆ ಆಡಳಿತ ರೂಢ ಬಿಜೆಪಿಯಿಂದ ಭಾನುಮತಿ 2 ಸೆಟ್ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಇನ್ನೋರ್ವ ಅಭ್ಯರ್ಥಿಯಾಗಿ ವನಿತಾ ಪ್ರಸಾದ್ ಹಾಗೂ ವಿಪಕ್ಷ ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಭಾನುಮತಿ ಅವರ ಒಂದು ನಾಮಪತ್ರದಲ್ಲಿ ಜಾತಿ ನಾಮಪತ್ರ ಸಲ್ಲಿಸದ ಕಾರಣ ಅದನ್ನು ತಿರಸ್ಕರಿಸಲಾಯಿತು. ಬಿಜೆಪಿಯ ವನಿತಾ ಪ್ರಸಾದ್ ನಾಮಪತ್ರ ಹಿಂಪಡೆದ ಕಾರಣ ಕಣದಲ್ಲಿ ಉಳಿದ ಬಿಜೆಪಿಯ ಭಾನುಮತಿ, ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ಪರ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಬಿಜೆಪಿಯ ಭಾನುಮತಿ ಪರ 47 ಹಾಗೂ ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ಪರ 14 ಮತಗಳು ಚಲಾವಣೆ ಗೊಂಡು ಬಿಜೆಪಿಯ ಭಾನುಮತಿ ಅವರನ್ನು ಉಪ ಮೇಯರ್ ಆಗಿ ಚುನಾವಣಾ ಅಧಿಕಾರಿ ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್ ಘೋಷಿಸಿದರು. ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯಿತು.


Spread the love
Subscribe
Notify of

0 Comments
Inline Feedbacks
View all comments