ಮನಸ್ಸಿನ ಶಾಂತಿಗಾಗಿ ಕೊಲಂಬೋಗೆ ಹೋಗ್ತೀನಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ: ಜಮೀರ್ ಗುಡುಗು
ಬೆಂಗಳೂರು: ಡ್ರಗ್ ವಿಚಾರದಲ್ಲಿ ನನ್ನ ಹೆಸರು ತಳುಕು ಹಾಕಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ನಾನು ಯಾವ ತಪ್ಪು ಮಾಡಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜನಾ ನನ್ನ ಜೊತೆ ಕೊಲಂಬೋಗೆ ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಈಗ ಸಂಜನಾ ಬಿಟ್ಟು ಫಾಸಿಲ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಎಲ್ಲೂ ತಪ್ಪು ಮಾಡಿಲ್ಲ.ಪೊಲೀಸರು ತನಿಖೆ ಮಾಡುತ್ತಿದ್ದಾರೆ.ನಂತರ ಸತ್ಯ ಹೊರಬರಲಿದೆ ಎಂದರು. ಸಂಜನಾ ಜೊತೆ ಜಮೀರ್ ಹೋಗಿದ್ದರು ಎಂದು ಹೇಳಿರುವ ಸಂಬರಗಿ, ನಾನು ಅವರ ಜೊತೆ ಹೋಗಿರುವ ಒಂದು ಫೋಟೋ ತೋರಿಸಲಿ ಎಂದರು
ಈ ಎಲ್ಲದರ ಹಿಂದೆ ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ. ಆದರೆ ನಮ್ಮ ರಾಜ್ಯ ಪೋಲೀಸರು ನಂಬರ್ ಒನ್. ಅವರ ಬಗ್ಗೆ ನನಗೆ ವಿಶ್ವಾಸವಿದೆ. ಸಂಬರಗಿ ವಿರುದ್ಧ ಪೋಲೀಸರಿಗೆ ದೂರು ಕೊಟ್ಟಿದ್ದೇನೆ, ಕಾನೂನು ಹೋರಾಟ ನಡೆಯುತ್ತಿದೆ. ಪೋಲೀಸ್ ತನಿಖೆ ನಡೆಸುತ್ತಿದ್ದಾರೆ ಎಂದು ಶಾಸಕ ಜಮೀರ್ ಹೇಳಿದ್ದಾರೆ.
ಇದಲ್ಲದೆ ಸಂಬರಗಿ ತಮ್ಮ ವಿರುದ್ಧ ಎಲ್ಲಿಯೂ ಡ್ರಗ್ಸ್ ಆರೋಪ ಮಾಡಿಲ್ಲ. ಅವರು ಅವರ ಕೆಲಸ ಮಾಡಲಿ. ಅಷ್ಟಕ್ಕೂ ನನಗೂ ಫಾಸಿಲ್ ಗೂ ಸಂಪರ್ಕವಿಲ್ಲ. ಕಳ್ಳನೊಬ್ಬ ನನ್ನೊಡನೆ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಣಾನು ಕಳ್ಳನಾಗುತ್ತೇನೆಯೆ? ಎಂದು ಅವರು ಪ್ರಶ್ನಿಸಿದ್ದಾರೆ.
ನಾನು ವರ್ಷಕ್ಕೊಮ್ಮೆ ಉಮ್ರಾಗೆ ಹೋಗುತ್ತೇನೆ. ರಾಜ್ಯದಿಂದ ಸಾವಿರಾರು ಜನ ಉಮ್ರಾಗೆ ಬರುತ್ತಾರೆ. ಅಲ್ಲಿಗೆ ಅವನೂ ಬಂದಿರಬಹುದು. ನಾನು ಕಳೆದ 23 ವರ್ಷದಿಂದ ಉಮ್ರಾಗೆ ತೆರಳುತ್ತಿದ್ದೇನೆ. ಒಂದು ವೇಳೆ ಡ್ರಗ್ಸ್ ದಂಧೆಯಲ್ಲಿ ಫಾಸಿಲ್ ಕೈವಾಡವಿದ್ದರೆ ಅವನಿಗೆ ಗಲ್ಲುಶಿಕ್ಷೆಯಾಗಲಿ.
ಶಾಂತಿ-ನೆಮ್ಮದಿಗಾಗಿ ಕೊಲಂಬೋಗೆ ಹೋಗ್ತೀನಿ
ಕೊಲಂಬೋಗೆ ನಾನು ನನ್ನ ಕುಟುಂಬದೊಡನೆ ಪ್ರವಾಸ ಹೋಗಿದ್ದೇನೆ. ಕುಮಾರಸ್ವಾಮಿ ಜತೆಗೂ ಹೋಗಿದ್ದೇನೆ. ಜೆಡಿಎಸ್ ನ ಶಾಸಕರ ಜತೆಗೂ ಹೋಗಿದ್ದೇನೆ. ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದಂತೆ ಅರ್ಥನಾ? ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಪ್ರವಾಸ ಹೋಗುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಜಮೀರ್ ಸ್ಪಷ್ಟನೆ ಕೊಟ್ಟಿದ್ದಾರೆ.