ಮನೆ ಮನೆಗಳಲ್ಲಿ ಯೋಗ – ದಿನಕರ ಬಾಬು ಆಶಯ

Spread the love

ಮನೆ ಮನೆಗಳಲ್ಲಿ ಯೋಗ – ದಿನಕರ ಬಾಬು ಆಶಯ

ಉಡುಪಿ: ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಪ್ರತಿ ಮನೆ ಮನೆಗಳಲ್ಲಿ ಯೋಗಾಸನ ಚಟುವಟಿಕೆಗಳು ದಿನನಿತ್ಯ ನಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಅವರು ಬುಧವಾರ ಆಯುಷ್ ಇಲಾಖೆ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ, ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿ ಉಜಿರೆ ಇವರ ಸಹಭಾಗಿತ್ವದಲ್ಲಿ, ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರ ಪ್ರದೇಶದಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಅರಿವು ಮೂಡಿದೆ ಆದರೆ ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಯೋಗವನ್ನು ದಿನನಿತ್ಯದ ಚಟುವಟಿಕೆಯನ್ನಾಗಿಸಿಕೊಂಡಲ್ಲಿ ಜನರ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸಹಾ ಉತ್ತಮಗೊಳಿಸಿಕೊಳ್ಳಬಹುದಾಗಿದ್ದು, ಗ್ರಾಮೀಣ ಜನರ ಆರೋಗ್ಯ ದೃಷ್ಠಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಯೋಗದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಿದೆ, ಈ ನಿಟ್ಟಿನಲ್ಲಿ ಸಂಬಂದಪಟ್ಟ ಇಲಾಖೆಗಳು ಕ್ರಮವಹಿಸುವಂತೆ ದಿನಕರ ಬಾಬು ಸೂಚಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಯೋಗದಿಂದ ದೈನಂದಿನ ಒತ್ತಡಗಳಿಂದ ಮುಕ್ತಿ ಸಿಗಲಿದೆ, ಯೋಗದಿಂದ ಆರೋಗ್ಯಯುತವಾಗಿ, ದೀರ್ಘಾಯುಷ್ಯ ಪಡೆಯಬಹುದಾಗಿದ್ದು, ಭಾರತೀಯ ಪರಂಪರೆಯಾದ ಯೋಗ ಇಂದು ವಿಶ್ವಮಾನ್ಯವಾಗಿದೆ, ಯೋಗದ ಮಹತ್ವನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ಯೋಗಕ್ಕೆ ಪುರಾತನ ಇತಿಹಾಸ ಇದೆ, ಯೋಗದಿಂದ ನಿರೋಗಿಯಾಗಬಹುದು, ಸೂರ್ಯ ನಮಸ್ಕಾರ ಉತ್ತಮ ಆಸನವಾಗಿದ್ದು, ಹಲವು ರೋಗಗಳನ್ನು ಇದರಿಂದ ದೂರವಿಡಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಜಗದೀಶ್ ರಾವ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಉಡುಪಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ.ಮಹಮದ್ ರಫೀಕ್, ಪರ್ಕಳದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಶಿವರಾಜ್ ಪಾಟೀಲ್, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸುಜಾತ ಅಕ್ಕ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್ ಸ್ವಾಗತಿಸಿದರು, ಡಾ. ಪೂಜಾ ವಂದಿಸಿದರು. ಸುಂದರ್ ಗಂಗೊಳ್ಳಿ ನಿರೂಪಿಸಿದರು.


Spread the love