ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ :ಎಸ್ ಸಸಿಕಾಂತ್ ಸೆಂಥಿಲ್
ಮಂಗಳೂರು : ನಗರದಲ್ಲಿ ಜ್ವರ ಪ್ರಕರಣವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ 200 ತಂಡ ರಚಿಸಿ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿ ಸಂಗ್ರಹಿಸಲು ಹಾಗೂ ಜನರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ನಿಯಂತ್ರಣ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಅವರು, ಸಮೀಕ್ಷೆ ನಡೆಸುವವರಿಗೆ ಮೊದಲಿಗೆ ತರಬೇತಿ ನೀಡಿ, ಕೂಡಲೇ ಕಾರ್ಯ ಪ್ರಾರಂಭಿಸಬೇಕು. ಪ್ರತಿದಿನ ಕನಿಷ್ಠ 50 ಮನೆಗಳಿಗೆ ತೆರಳಿ ಮಾಹಿತಿ ನೀಡಿ ಹಾಗೂ ಹೆಚ್ಚಾಗಿ ಪ್ರಕರಣ ದಾಖಲಾದ ಪ್ರದೇಶಗಳಿಗೆ ನಿಗಾ ವಹಿಸಿ ಸಮೀಕ್ಷೆ ನಡೆಸಿ ವರದಿ ಸಂಗ್ರಹಿಸಬೇಕು. ಮಂಗಳೂರಿನಲ್ಲಿ ಸಾಕಷ್ಟು ಜನತೆ ಖಾಸಗಿ ಆಸ್ಪತ್ರೆಗೆ ತೆರಳುವುದರಿಂದ ಅಧಿಕಾರಿಗಳು ಆಸ್ವತ್ರೆಯಲ್ಲಿ ಪ್ರತಿದಿನ ದಾಖಲಾಗುವಂತಹ ಶಂಕಿತ ಜ್ವರ ಪ್ರಕರಣಗಳ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿದಿನದ ವರದಿ ನೀಡಬೇಕು ಎಂದು ಹೇಳಿದರು.
ಅಲ್ಲಲ್ಲಿ ಮಳೆನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ, ಹೀಗಾಗಿ ಮನೆ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಮಹಡಿ, ಡ್ರಮ್, ಬಕೆಟ್ ಇತ್ಯಾದಿ ವಸ್ತುಗಳಲ್ಲಿ ಸಂಗ್ರಹವಾಗುವ ಶುದ್ದ ಮಳೆ ನೀರಿನಲ್ಲಿಯೇ ಸೊಳ್ಳೆ ಉತ್ಪತ್ತಿಯಾಗುವುದು ಆದರಿಂದ ಮನೆ ಸುತ್ತಮುತ್ತ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಅವರು ತಿಳಿಸಿದರು.
ಡೆಂಗ್ಯೂ ಸಾಮಾನ್ಯ ವೈರಲ್ ಜ್ವರವಾಗಿದ್ದು ಜನತೆ ಹಗಲು ಹೊತ್ತಿನಲ್ಲಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು. ರಾತ್ರಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಬೇವಿನ ಎಣ್ಣೆ ಹಚ್ಚಿ ಹಾಗೂ ಮಕ್ಕಳ, ವಯಸ್ಕರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ. ಸಾಮಾನ್ಯ ಜ್ವರ, ತಲೆನೊವು ಬಂದಾಗ ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆ ಹೆಚ್ಚಾಗಿ ಉತ್ಪತ್ತಿಯಾಗುವ ಪ್ರದೇಶಕ್ಕೆ ಮಹಾನಗರ ಪಾಲಿಕೆ ವತಿಯಿಂದ ಮನೆ ಮನೆ ತೆರಳಿ ಫಾಗಿಂಗ್ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಜನತೆ ಭಯಭೀತರಾಗದೇ ಸರಿಯಾದ ರೀತಿಯಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ತರಬೇತುದಾರರಾದ ರಾಹುಲ್ ಸಿಂಧ್ಯಾ, ನೋಡೆಲ್ ಅಧಿಕಾರಿ ಡಾ ಶರೀಫ್ ಹಾಗೂ ಡಾ ರವಿಕುಮಾರ್ ಉಪಸ್ಥಿತರಿದ್ದರು.