ಮಫ್ತಿಯಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಕುಂದಾಪುರ: ಕೋಡಿ ಸಮುದ್ರ ತೀರದಲ್ಲಿ ಅಂಬರ್ ಗ್ರೀಸ್ ಮಾರಾಟದ ಬಗ್ಗೆ ( ತಿಮಿಂಗಿಲ ವಾಂತಿ) ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದಿದ್ದ ಅರಣ್ಯ ಇಲಾಖೆ ಮಂಗಳೂರು ವಿಭಾಗದ ಸಿಐಡಿ ವೀಕ್ಷಣಾ ದಳದ ಅಧಿಕಾರಿಗಳ ತಂಡದ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಡಿ ಕಸಬಾ ನಿವಾಸಿಗಳಾದ ಅಬೂಬಕ್ಕರ್, ಮೊಹಮ್ಮದ್ ಆಲಿ, ಉಬೇದ್ ಹಾಗೂ ಹಸೈನರ್ ಬಂಧಿತ ಆರೋಪಿಗಳು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದ ಬುಧವಾರ ಕೋಡಿಯ ಸೌಹಾರ್ದ ಭವನದಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಬಾತ್ಮೀದಾರರು ನೀಡಿದ್ದ ಖಚಿತ ಮಾಹಿತಿ ಮೇರೆಗೆ ಮಫ್ತಿಯಲ್ಲಿ ಮಂಗಳೂರಿನಿಂದ ಬಂದಿದ್ದ ಅರಣ್ಯ ಸಂಚಾರಿ ದಳದ ಸಿಐಡಿ ವಿಭಾಗದ ಎಸ್.ಐ ಜಾನಕಿ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯುವ ವೇಳೆ ಆರೋಪಿಗಳು ಹಾಗೂ ಇತರರು ಸ್ಥಳೀಯರು ಸೇರಿ ಹಲ್ಲೆ ನಡೆಸಿ, ಇಲಾಖೆಯ ಸೇವಾ ಪಿಸ್ತೂಲ್ ಹಾಗೂ 2 ಮೊಬೈಲ್ ಕಿತ್ತುಕೊಂಡಿರುವ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಉಪ ವಿಭಾಗದ ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ, ನಿರೀಕ್ಷಕ ನಂಜಪ್ಪ ಹಾಗೂ ಎಸ್.ಐ ನಂಜಾ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿರುವ ಕುಂದಾಪುರ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.