ಮಮತೆಯ ಸಾಕಾರಮೂರ್ತಿ ಹೆತ್ತಬ್ಬೆ : ಡಾ.ರೇಖಾ ಬನ್ನಾಡಿ 

Spread the love

ಮಮತೆಯ ಸಾಕಾರಮೂರ್ತಿ ಹೆತ್ತಬ್ಬೆ : ಡಾ.ರೇಖಾ ಬನ್ನಾಡಿ 

ಬ್ರಹ್ಮಾವರ: ಒಡಲ ಆಳದಲ್ಲಿನ ಪ್ರೀತಿ ಹಾಗೂ ಮಮತೆಯನ್ನು ಹೆತ್ತಬ್ಬೆಯಲ್ಲಿ ಅಲ್ಲದೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ತನ್ನ ಸಂಕಷ್ಟಗಳನ್ನು ಮರೆತು ತನ್ನ ಮಕ್ಕಳ ಯೋಗಕ್ಷೇಮವನ್ನು ಬಯಸುವ ಏಕೈಕ ಜೀವ ತಾಯಿ ಮಾತ್ರ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ರೇಖಾ ಬನ್ನಾಡಿ ಹೇಳಿದರು.

ತಾಲ್ಲೂಕಿನ ಯಡ್ತಾಡಿ ಸಮೀಪದ ಆಲ್ತಾರು ಗ್ರಾಮದ ದೇವಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ಕೀರ್ತಿ ಶೇಷ ಕೊರಗಯ್ಯ ಶೆಟ್ಟಿ ವೇದಿಕೆಯಲ್ಲಿ ಅಲ್ತಾರು ಜಯರಾಮ್ ಶೆಟ್ಟಿ ಕುಟುಂಬಿಕರು ಆಯೋಜಿಸಿದ ‘ ಸಾಧಮ್ಮ ಶೆಡ್ತಿಯವರ 100ರ ಸಂಭ್ರಮ ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಅಮ್ಮ ಎನ್ನುವ ಎರಡಕ್ಷರದಲ್ಲಿ ಅವಿಸ್ಮರಣೀಯ ಸಂಬಂಧಗಳು ಹುದುಗಿದೆ. ಭಾವನಾತ್ಮಕವಾಗಿ ಮಕ್ಕಳನ್ನು ಬೆಸೆಯುವ ಈ ಶಬ್ದಕ್ಕೆ ಇನ್ನೊಂದು ಪರ್ಯಾಯ ಪದವಿಲ್ಲ. ತಾಯಿ ಎಂದ್ರೆ ಫಲವತ್ತಾದ ಕಪ್ಪು ಮಣ್ಣು ಇದ್ದಂತೆ, ಅದರ ಒಡಲಿನಿಂದ ಬೆಳೆಯುವ ಪ್ರತಿ ಫಸಲು ತನ್ನಂತೆ ಅರಳಬೇಕು ಎನ್ನುವ ಉದ್ಧಾತ್ತವಾದ ಕಲ್ಪನೆ ಹಾಗೂ ಚಿಂತನೆ ತಾಯಿಗೆ ಇದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಗಿಳಿಯಾರು ಜನಸೇವಾ ಟ್ರಸ್ಟ್‌ನ ಸಂಚಾಲಕ ವಸಂತ ಗಿಳಿಯಾರ್ ಅವರು ಜನ್ಮ ನೀಡಿದ ತಾಯಿ, ಮಮತೆಯ ತೊಟ್ಟಿಲನ್ನು ಕಟ್ಟಿಕೊಟ್ಟ ಭೂಮಿ, ಸ್ವರ್ಗದ ಸವಿಗಿಂತಲೂ ಶ್ರೇಷ್ಠವಾದುದು. ಸ್ವರ್ಣ ಶ್ರೀಮಂತಿಕೆಯನ್ನು ಹೊಂದಿದ್ದ ಲಂಕೆಯನ್ನು ಜಯಿಸಿದ ಶ್ರೀರಾಮಚಂದ್ರ, ಮಾತೃ ಪ್ರೇಮದ ಕಾರಣದಿಂದ ಅಯೋಧ್ಯೆಗೆ ಬಂದಿರುವ ಇತಿಹಾಸ ಭಾರತದ ಪುರಾಣ ಪುಟದಲ್ಲಿ ಇದೆ. ಮಾತೆ ವಾತ್ಸಲ್ಯ ಹಾಗೂ ಕರುಳ ಕುಡಿಗಳಿಗಾಗಿ ಆಕೆಗೆ ಇರುವ ಮಿಡಿತಗಳನ್ನು ಬಣ್ಣಿಸಲು ಪದ ಪುಂಜದಲ್ಲಿ ಪದಗಳಿಲ್ಲ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೈದರ್‌ಬಾದ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಗುಣಮಟ್ಟದ ಹಾಗೂ ಶುದ್ಧ ಆಹಾರ ಪದ್ಧತಿಗಳೇ ನಮ್ಮ ಹಿರಿಯರ ಆಯುಷ್ಯದ ಗುಟ್ಟಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಕಲುಷಿತ ಆಹಾರ ಪದಾರ್ಥಗಳು, ಜನರ ಆರೋಗ್ಯ ಹಾಗೂ ನೆಮ್ಮದಿಯ ಜೀವನವನ್ನು ಕಸಿದುಕೊಳ್ಳುತ್ತಿದೆ. ಹಿರಿತನವೇ ಜ್ಞಾನವೃದ್ಧತೆಯ ದ್ಯೋತಕವಾಗಿ ಶತಾಯುಷಿಗಳು ಯಾರಿಗೂ ತಲೆ ಬಗ್ಗಿಸದೆ ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು ಎಂದರು.

ಕಾಜ್ರಳ್ಳಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆಲ್ತಾರು ನಿರಂಜನ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ ಕಾರ್ಯಕ್ರವನ್ನು ಉದ್ಘಾಟಿಸಿದ್ದರು.

ವಿಕಲಚೇತನರಿಗೆ, ಅರೋಗ್ಯ ಸಮಸ್ಯೆ ಇರುವವರಿಗೆ, ತಂದೆ -ತಾಯಿ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಮತ್ತು ಬಡವರಿಗೆ ಸಾಧಮ್ಮ ಶೆಡ್ತಿಯವರು ಸಹಾಯಧನ ವಿತರಿಸಿ ಸಾಂತ್ವನ ಹೇಳಿ, ಆಶೀರ್ವದಿಸಿದರು. ಅಜ್ಜಿಯ ಓರಗೆಯವರನ್ನು ಕುಟುಂಬಿಕರು ಗೌರವಿಸಿದರು. ಜಯರಾಮ್ ಶೆಟ್ಟಿ ಅಲ್ತಾರು ಅವರಿಗೆ ” ಕುಟುಂಬ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗುಡ್ಡಾಮ್ಮಾಡಿ ಸುಬ್ರಮಣ್ಯ ಕ್ಷೇತ್ರದ ಆಡಳಿತ ಧರ್ಮದರ್ಶಿ ಬಿ.ಅರುಣ್‌ಕುಮಾರ ಶೆಟ್ಟಿ, ಉದ್ಯಮಿ ಅಮಾಸೆಬೈಲು ವಿಠ್ಠಲ್ ಶೆಟ್ಟಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಶಕೀಲಾ ಶೆಟ್ಟಿ ಪಡುಮನೆ, ಎಂಐಟಿ ಪ್ರಾಧ್ಯಾಪಕ ಎಸ್‌.ವಿ.ಉದಯ್‌ಕುಮಾರ ಶೆಟ್ಟಿ, ಹೈದರ್‌ಬಾದ್ ಉದ್ಯಮಿಗಳಾದ ಶಿವರಾಮ್ ಶೆಟ್ಟಿ ದೇವುಬೆಟ್ಟು, ರಾಜು ಕೊಠಾರಿ, ರತ್ನಾಕರ ರೈ, ಚಂದ್ರಶೇಖರ ಶೆಟ್ಟಿ, ಶಿವರಾಮ್ ಶೆಟ್ಟಿ ಇದ್ದರು.

ಉಪನ್ಯಾಸಕ ಕೃಷ್ಣ ಮಾಸ್ತರ್ ಸ್ವಾಗತಿಸಿದರು, ಅಲ್ತಾರು ನವೀನ್‌ ಶೆಟ್ಟಿ ನಿರೂಪಿಸಿದರು, ನ್ಯಾಯವಾದಿ ಆಲ್ತಾರು ಗೌತಮ ಹೆಗ್ಡೆ ದೇವುಬೆಟ್ಟು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಗಣೇಶ್ ಮೊಳಹಳ್ಳಿ ಹಾಗೂ ಶ್ರಾವ್ಯ ಶೆಟ್ಟಿ ಅವರ ನೇತ್ರತ್ವದಲ್ಲಿ ‘ ಗೀತಾ ಗಾಯನ ‘ , ಚೇತನ್ ನೈಲಾಡಿ ತಂಡದವರಿಂದ ಹೆಂಗಸ್ರ ಪಂಚಾಯಿತಿ ಹಾಗೂ ಹಳೆ ಹಾಡಿಗೆ ಹೊಸ ಹೆಜ್ಜೆ ಕಾರ್ಯಕ್ರಮಗಳು ನಡೆಯಿತು.


Spread the love