ಮರಳು ದಿಬ್ಬಕ್ಕೆ ಡಿಕ್ಕಿ ಹೊಡೆದು ಮುಳುಗಿದ ಬೋಟು; 10 ಮಂದಿಯ ರಕ್ಷಣೆ
ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತರಳಿದ್ದ ಗಿಲ್ನೆಟ್ ಬೋಟ್ ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟಿನಲ್ಲಿದ್ದ 10ಮಂದಿ ಮೀನುಗಾರರನ್ನು ಇನ್ನೊಂದು ಮೀನುಗಾರಿಕಾ ಬೋಟಿನವರು ರಕ್ಷಿಸಿರುವ ಘಟನೆ ಧಕ್ಕೆ ಸಮೀಪದ ಅಳಿವೆಬಾಗಿಲು ಸಮೀಪ ಬುಧವಾರ ಸಂಜೆ ವೇಳೆ ಸಂಭವಿಸಿದೆ.
ಲೋಕನಾಥ ಬೋಳಾರ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಕೆಲ ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಬುಧವಾರ ಸಂಜೆ ಮಂಗಳೂರಿನ ಧಕ್ಕೆಗೆ ವಾಪಸ್ಸಾಗುವ ಸಂದರ್ಭ ಅಳಿವೆಬಾಗಿಲು ಸಮೀಪ ಮರಳು ದಿಬ್ಬಕ್ಕೆ ಬಡಿದ ಪರಿಣಾಮ ಬೋಟ್ ಒಡೆದು ಮುಳುಗಲು ಆರಂಭವಾಗಿತ್ತು.
ವೇಳೆ ಅದರಲ್ಲಿದ್ದ 10 ಮಂದಿ ಮೀನುಗಾರರು ರಕ್ಷಣೆ ಯಾಚಿಸುತ್ತಿದ್ದ ಸಂದರ್ಭ ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ಇನ್ನೊಂದು ಬೋಟಿನವರು ಅಲ್ಲಿದ್ದ 10ಮಂದಿಯನ್ನೂ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆಯಿಂದ ಬೋಟ್ ಮಾಲೀಕರಿಗೆ ರೂ. 70 ಲಕ್ಷ ನಷ್ಟ ಉಂಟಾಗಿದೆ.
ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.