ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನವೆಂಬರ್ 10ರಂದು ಉಡುಪಿ ಜಿಲ್ಲಾ ಬಂದ್

Spread the love

ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನವೆಂಬರ್ 10ರಂದು ಉಡುಪಿ ಜಿಲ್ಲಾ ಬಂದ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ ಮರಳು ತೆಗೆಯುವುದಕ್ಕೆ ಪರವಾನಿಗೆ ನೀಡಲಾದದ ಎಲ್ಲಾ 170 ಗುತ್ತಿಗೆದಾರರಿಗೆ ಈ ಬಾರಿಯೂ ಪರವಾನಿಗೆ ನೀಡಬೇಕು ಎಂದು ಪಟ್ಟು ಹಿಡಿದಿರುವ ಮರಳಿಗಾಗಿ ಹೋರಾಟ ಸಮಿತಿಯು, ನ.10ರಂದು ಉಡುಪಿ ಜಿಲ್ಲೆ ಬಂದ್ ಗೆ ಕರೆ ನೀಡಿದೆ. ಅಲ್ಲದೇ ನ.10ರ ನಂತರ ಜಿಲ್ಲೆಯಾದ್ಯಂತ ನಿರ್ಮಾಣ ಕಾಮಗಾರಿಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಸ್ವಯಂಪ್ರೇರಣೆಯಿಂದ ನ್ಯಾಯ ಸಿಗುವರೆಗೆ ಸ್ಥಗಿತಗೊಳಿಸಬೇಕು ಎಂದು ನಿರ್ಣಯಿಸಿದೆ.

ಜಿಲ್ಲೆಯ ಮರಳು ಸಮಸ್ಯೆ ಪರಿಹಾರಕ್ಕಾಗಿ ನಡೆಸುತ್ತಿರುವ ಆಹೋರಾತ್ರಿ ಅನಿರ್ದಿಷ್ಠಾವಧಿ ಧರಣಿಯ 7ನೇ ದಿನ ಬುಧವಾರ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳ ಸಮಾಲೋಚನಾ ಸಭೆ ನಡೆಸಲಾಯಿತು. ಧರಣಿಯ ನೇತೃತ್ವವನ್ನು ವಹಿಸಿರುವ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಸಭೆಯ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರಕಟಿಸಿದರು.

ಈ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಪೂರ್ಣ ಪ್ರಮಾಣ ದಲ್ಲಿ ಮರಳುಗಾರಿಕೆ ಪ್ರಾರಂಭವಾಗುವವರೆಗೆ ಮುಂದುವರೆಸಲಾಗುವುದು. ನ.8ರವರೆಗೆ ನೀತಿ ಸಂಹಿತೆ ಹಾಗೂ ಹಬ್ಬ ಇರುವುದರಿಂದ ನ.10ರಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಎಚ್ಚರಿಸಲು ಎಲ್ಲ ಸಂಘಟನೆಗಳ ಸಹ ಕಾರದೊಂದಿಗೆ ಉಡುಪಿ ಜಿಲ್ಲೆ ಬಂದ್ ಮಾಡಲಾಗುವುದು. ನ.10ರ ನಂತರ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿ ಲಾರಿ, ಕ್ರಷರ್, ಕಟ್ಟಡ ಸಾಮಗ್ರಿ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ, ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ, ಎಲ್ಲಾ 170 ಗುತ್ತಿಗೆದಾರರಿಗೆ ಮರಳು ತೆಗೆಯುುವ ಪರವಾನಿಗೆ ನೀಡುವವರೆಗೆ ಅನಿರ್ದಿಷ್ಠಾವಧಿ ಧರಣಿ ಮುಂದುವರಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜೆಡಿಎಸ್ ಮುಖಂಢ ಸಬ್ಲಾಡಿ ಮಂಜಯ್ಯ ಹೆಗ್ಡೆ ಮತ್ತು ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.


Spread the love