ಮರಳು ಸಮಸ್ಯೆ ವಿಚಾರಲ್ಲಿ ಸಚಿವ ಪ್ರಮೋದ್ ಅವರಿಂದ ತುಘಲಕ್ ಕಾನೂನು; ರಘಪತಿ ಭಟ್
ಉಡುಪಿ: ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಕಾಡುತ್ತಿರುವ ಮರಳು ಸಮಸ್ಯೆಯನ್ನು ಬಗೆಹರಿಸುವ ಬದಲು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮದೇ ಆದ ತುಘಲಕ್ ಕಾನೂನು ಮಾಡಿಕೊಂಡು ರಾಜಕೀಯ ಮಾಡುತ್ತಾರೆ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿಯಲ್ಲಿನ ಮರಳು ಸಮಸ್ಯೆಯಿಂದಾಗ ಬಡ ಜನರು ಸಮಸ್ಯೆಯಿಂದ ಬಳುತ್ತಿದ್ದು ಕೇಂದ್ರದ ಹಸಿರು ಪೀಠದಲ್ಲಿ ದಾಖಲಾಗಿದ್ದ ಕೇಸಿಗೆ ತಡೆಯಾಜ್ಞೆ ತೆರವುಗೊಂಡು 5 ತಿಂಗಳು ಕಳೆದರೂ ಕೂಡ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಮರಳು ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲಗೊಂಡಿದೆ. ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರ ಹಸ್ತಕ್ಷೇಪದಿಂದ ಇನ್ನೂ ಕೂಡ ಯಾವುದೇ ರೀತಿಯ ಪ್ರಗತಿ ಕಂಡಿಲ್ಲ. ಅಗಸ್ಟ್ 5 ರಂದು ರಾಜ್ಯದ ಪರಿಸರ ಮಂಡಳಿ ಸಭೆ ನಡೆಸಿ ಮರಳುಗಾರಿಕೆ ನಡೆಸುವಂತೆ ಸೂಚನೆ ನೀಡಿ ಎನ್ ಒ ಸಿ ಕೂಡ ನೀಡಿದ್ದು, ಜಿಲ್ಲಾಡಳಿತ ಮಾತ್ರ ಇದುವರೆಗೆ ಯಾವುದೇ ರೀತಿಯ ಅನುಮತಿ ನೀಡದೆ ಜನರನ್ನು ಮತ್ತೋಷ್ಟು ಸಮಸ್ಯೆಗೆ ಒಡ್ಡುತ್ತಿದೆ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಹಸ್ತಕ್ಷೇಪ ನಡೆಸುತ್ತಿದ್ದು ಹಿಂದಿನಿಂದ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ 170 ಮಂದಿಯಲ್ಲಿ 45 ಮಂದಿ ಪರವಾನಿಗೆಯನ್ನು ತಡೆಹಿಡಿಯವಂತೆ ಜಿಲ್ಲಾಡಳಿತದ ವತಿಯಿಂದ ಹೈಕೋರ್ಟಿನಲ್ಲಿ ಕೇವಿಯಟ್ ಸಲ್ಲಿಸಲಾಗಿದೆ. ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಯ ಬೆಂಬಲಿತ ಮರಳುಗಾರಿಕೆ ಮಾಡುತ್ತಿರುವವರಿಗೆ ಪರವಾನಿಗೆ ಸಿಗದಂತೆ ನೋಡಿಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂತಹ ಕೀಳು ಮಟ್ಟದ ರಾಜಕೀಯ ನಡೆಸುತ್ತಿದ್ದು, ಅವರಿಗೆ ಜಿಲ್ಲೆಯ ಮರಳು ಸಮಸ್ಯೆ ಪರಿಹಾರ ಮಾಡುವ ಯಾವುದೇ ಆಸೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಈಗಾಗಲೇ ಜಿಲ್ಲಾಡಳಿತ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು ಅರ್ಜಿಗಳನ್ನು ಅಹ್ವಾನಿಸಿದ್ದು, ಅದಕ್ಕಾಗಿ ನೀಡಿರುವ ನಿಬಂಧನೆಗಳು ಮಾತ್ರ ಹಾಸ್ಯಸ್ಪದವಾಗಿದೆ. ಮರಳುಗಾರಿಕೆ ನಡೆಸುವವರು ರಾಜಕೀಯ ವ್ಯಕ್ತಿಗಳಾಗಿರಬಾರದು, ಯಾವುದೇ ಸ್ವಂತ ವಾಹನ ಹೊಂದಿರಬಾರದು ಅಲ್ಲದೆ ಅದೇ ಗ್ರಾಮದವರಾಗಿರಬೇಕು ಎನ್ನುವುದು ಯಾವ ರೀತಿಯ ನ್ಯಾಯ ಎಂದರು. ಒಂದು ವೇಳೆ ಅಂತಹ ನಿಯಮ ಪ್ರತಿಯೊಬ್ಬರಿಗೂ ಅನ್ವಯವಾದರೆ ಪ್ರಮೋದ್ ಮಧ್ವರಾಜ್ ತನ್ನ ಉದ್ಯಮವನ್ನು ಮಲ್ಪೆಯಲ್ಲಿ ನಡೆಸಲು ಅವಕಾಶವಿಲ್ಲ ಕಾರಣ ಅವರು ವಾಸ್ತವ್ಯವಿರುವುದು ಕೊಳಲಗಿರಿಯಲ್ಲಿ ಆದ್ದರಿಂದ ರಾಜಕೀಯ ಉದ್ದೇಶಕ್ಕಾಗಿ ಇಂತಹ ಅನಪೇಕ್ಷಿತ ನಿಯಮಗಳನ್ನು ಹಾಕುವುದು ಸರಿಯಲ್ಲ ಎಂದರು. ಅಲ್ಲದೆ ಕ್ರಿಮಿನಲ್ ಕೇಸು ಹೊಂದಿರುವವರು ಕೂಡ ಮರಳುಗಾರಿಕೆಗೆ ಅವಕಾಶವಿಲ್ಲ ಎಂದು ನಿಯಮದಲ್ಲಿ ಹಾಕಿದ್ದು, ಹಿಂದಿನ ಜಿಲ್ಲಾಧಿಕಾರಿಗಳಾದ ರೇಜು ಅವರ ಕಾಲದಿಂದ ಕೂಡ ಮರಳುಗಾರಿಕೆ ಮಾಡಿಕೊಂಡು ಬಂದು ಈಗ ಏಕಾಎಕಿ ಇಂತಹ ನಿಯಮ ಹಾಕಿರುವುದರ ಹಿಂದೆ ಸಚಿವ ಪ್ರಮೋದ್ ಮಧ್ವರಾಜ್ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ. ಇದರ ಕುರಿತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಈಗಾಗಲೇ ಜಿಲ್ಲಾ ಬಿಜೆಪಿ ವತಿಯಿಂದ ಭೇಟಿಯಾಗಿದ್ದು, ಅಗಸ್ಟ್ 28 ರ ಒಳಗೆ ಮರಳುಗಾರಿಕೆ ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದೇವೆ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ಆಟಗಳಿಗೆ ಜಿಲ್ಲೆಯ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಎನಿಸಿಕೊಂಡಿರುವ ನೀವು ಬಲಿಯಾಗದಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ನಮ್ಮ ಮನವಿಗೆ ಸಕಾರತ್ಮಕವಾಗಿ ಅವರು ಸ್ಪಂದಿಸಿದ್ದಾರೆ ಒಂದು ವೇಳೆ ನಮ್ಮ ಗಡುವಿನ ಒಳಗೆ ಮರಳುಗಾರಿಕೆ ಆರಂಭವಾಗದೆ ಹೋದಲ್ಲಿ ಜಿಲ್ಲಾ ಬಿಜೆಪಿ ಅಹೋರಾತ್ರಿ ಧರಣಿ ಆರಂಭಿಸಿ ಪರಿಹಾರ ಸಿಗುವ ವರೆಗೂ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಪ್ರಮೋದ್ ಮಧ್ವರಾಜ್ ಸಾಂಪ್ರಾದಾಯಿಕ ಮರಳುಗಾರಿಕೆಯ ಕುರಿತು ನಿರ್ಲಕ್ಷ ವಹಿಸಿರುವುದರ ಹಿಂದೆ ಜಿಲ್ಲೆಯಲ್ಲಿ ಎಮ್ ಸ್ಯಾಂಡ್ ಲಾಭಿಗೆ ಮಣಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದಲೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುವಾಗ ಹೊರಗಡೆಯೇ ಸರಕಾರದಿಂದ ಎಮ್ ಸ್ಯಾಂಡಿಗೆ ಪ್ರೋತ್ಸಾಹ ಎಂಬ ಬೃಹತ್ ಗಾತ್ರದ ಜಾಹೀರಾತನ್ನು ಕೂಡ ಹಾಕಿದ್ದಾರೆ. ಜಿಲ್ಲೆಯಲ್ಲಿ ಎಮ್ ಸ್ಯಾಂಡಿಗೆ ಬೇಡಿಕೆ ಇಲ್ಲವಾಗಿದ್ದು ಕೂಡಲೇ ಜಿಲ್ಲಾಡಳೀತ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.