ಮರವಂತೆಯಲ್ಲಿ ಭೀಕರ ರಸ್ತೆ ಅಪಘಾತ, ಕಾರಿಗೆ ಬೈಕ್ ಡಿಕ್ಕಿ, ಸವಾರ ಮೃತ ; ಬೈಕ್ ಸಂಪೂರ್ಣ ಭಸ್ಮ
ಬೈಂದೂರು : ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕು ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತ ಯುವಕ ಪುನೀತ್ ಪೂಜಾರಿ (20), ಈತ ಇಲ್ಲಿನ ತೆಗ್ಗರ್ಸೆ ಗ್ರಾಮದ ನಿವಾಸಿ, ಬೈಂದೂರು ಜಿಪಂ ಸದಸ್ಯ ಶಂಕರ ಪೂಜಾರಿ ಅವರ ಅಣ್ಣನ ಮಗ. ಈತನ ಜೊತೆಗಿದ್ದ ಸಹಸವಾರ ಅಕಾಶ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ.
ಕುಂದಾಪುರದಿಂದ ಬೈಂದೂರು ಕಡೆಗೆ ಬರುತ್ತಿದ್ದ ಬೈಕ್ ಸವಾರರು, ನಾಗೂರಿನಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ಗೆ ಆಕಸ್ಮಿಕ ಬೆಂಕಿ ತಗುಲಿ ಬೈಕ್ ಸಂಪೂರ್ಣ ಭಸ್ಮಗೊಂಡಿತ್ತು, ಕಾರಿನ ಮುಂಭಾಗ ಸಂಪೂರ್ಣ ಬೆಂಕಿ ತಗುಲಿ ಸಾಕಷ್ಟು ನಷ್ಟ ಸಂಭವಿಸಿದೆ.
ಅಪಘಾತ ಸಂಭವಿಸದ ತಕ್ಷಣವೇ ಸ್ಥಳೀಯರ ಸಹಕಾರದೊಂದಿಗೆ ಬೈಕ್ ತಗುಲಿದ ಬೆಂಕಿಯನ್ನು ನಂದಿಸಿ, ಗಾಯಾಳನ್ನು ಗಂಗೊಳ್ಳಿಯ ಇಬ್ರಾಹಿಂ ತಮ್ಮ ಅಂಬುಲೇನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪುರ ಆಸ್ಪತ್ರೆಗೆ ಬೈಂದೂರು ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಬ್ಲಾಕ್ ಸಮಿತಿಯ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಭೇಟಿ ನೀಡಿದರು.