ಮರು ಮೌಲ್ಯಮಾಪನ: ಆಳ್ವಾಸ್‍ನ ಸುಜ್ಞಾನ್ ಆರ್. ಶೆಟ್ಟಿ ರಾಜ್ಯಕ್ಕೆ ಪ್ರಥಮ
ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಮರು ಮೌಲ್ಯಮಾಪನದಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಅವರು 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅದರಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಕನ್ನಡ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ತಲಾ ಒಂದೊಂದು ಅಂಕ ಕಡಿಮೆ ಬಂದಿತ್ತು. ಒಟ್ಟು 623 ಅಂಕಗಳನ್ನು ಗಳಿಸಿ 2ನೇ ರ್ಯಾಂಕನ್ನು ಪಡೆದುಕೊಂಡಿದ್ದರು. ತಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನು ನೀಡಿದ್ದೇನೆ ತನಗೆ ಇನ್ನೂ ಹೆಚ್ಚಿನ ಅಂಕಗಳು ಬರಬೇಕಿತ್ತು ಎಂದು ಆತ ಹೇಳಿದ್ದರಿಂದ ಮರು ಮೌಲ್ಯಮಾಪನಕ್ಕೆ ಕಳುಹಿಸಲಾಯಿತು. ಇದೀಗ ಬಂದ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿಯೂ 100ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಅವರಿಗೆ ಆಳ್ವಾಸ್ ಸಂಸ್ಥೆಯಿಂದ 2 ಲಕ್ಷ ರೂಪಾಯಿ ಪುರಸ್ಕಾರ ನೀಡುವುದಾಗಿ ಘೋಷಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಸುಜ್ಞಾನ್ ಅವರು ಪ್ರಥಮ ರ್ಯಾಂಕನ್ನು ಪಡೆಯುವ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಗೃಹಿಣಿ ಆರತಿ ಶೆಟ್ಟಿ ಅವರ ಪುತ್ರ ಸುಜ್ಞಾನ್, ಆಳ್ವಾಸ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದು ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. 623 ಅಂಕ ಪಡೆದಾಗ ಸ್ವಲ್ಪ ಅಸಮಾಧಾನವಾಗಿತ್ತು. ಅದಕ್ಕೆ ಮರುಮೌಲ್ಯಮಾಪನದ ನಿರ್ಧಾರ ತೆಗೆದುಕೊಂಡೆ. ಈಗ 625 ಅಂಕಗಳನ್ನು ಪಡೆದಿರುವುದು ಖುಷಿಯಾಗಿದೆ. ತಂದೆ, ತಾಯಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರ ಪ್ರೋತ್ಸಾಹದಿಂದ ಸಾಧನೆಗೆ ಸಹಕಾರಿಯಾಗಿದೆ. ತರಗತಿ ಅವಧಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳಿದ್ದು ನನಗೆ ವರದಾನವಾಗಿದೆ ಎಂದು ಸುಜ್ಞಾನ್ ತಿಳಿಸಿದ್ದಾರೆ.