ಮರೆಯಾಗುತ್ತಿವೆ ಮಾನವೀಯ ಮೌಲ್ಯಗಳು – ಜಸ್ಟೀಸ್ ಸಂತೋಷ್ ಹೆಗ್ಡೆ ವಿಷಾದ
ವಿದ್ಯಾಗಿರಿ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕಾರ ಹಾಗೂ ಸಂಪತ್ತುಗಳೆಂಬ ಮೋಹದಲ್ಲಿ ಸಿಲುಕಿದ್ದು, ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆಗಳೆಂಬ ಮೌಲ್ಯಗಳನ್ನು ಮರೆಯುತ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ವಿಷಾದಿಸಿರು.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವೇದಿಕೆಯಡಿಯಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನಲ್ಲಿ ಬಯಕೆಗಳು ಸಾಮಾನ್ಯ, ಆದರೆ, ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆತನ ಆಸೆಗಳು ಮಿತಿ ಮೀರಿದೆ. ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿದ ಮಾನವೀಯ ಮೌಲ್ಯಗಳನ್ನು ಮರೆತು ಕೇವಲ ಸ್ವಾರ್ಥ ಮನೋಭಾವ ಮನೆ ಮಾಡಿದೆ. ಇದರಿಂದ ಸಮಾಜದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿರುವುದು ದುರಂತ ಎಂದರು.
ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ನಮ್ಮ ಹಿರಿಯರು ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗಳನ್ನು ರೂಪಿಸಿದ್ದು, ಇಂದು ಅವುಗಳು ತಮ್ಮ ಸ್ಥಾಪಿತ ಉದ್ದೇಶವನ್ನು ಮರೆತು ಕಾರ್ಯನಿರ್ವಹಿಸುತ್ತಿವೆ. ತಾನು-ತಮ್ಮದೆಂಬ ಮನೋಭಾವನೆಯಿಂದ ಹೊರಬಂದು ಪ್ರತಿಯೊಬ್ಬರೂ ಜೀವನ ಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರಮ್ ಕ್ಲಬ್‍ನ ಸಂಯೋಜಕ ದೀಪಕ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೃದ್ಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯಸರ್ಕಾರ ಮಾಧ್ಯಮಗಳ ಮೇಲೇ ಹೇರಿರುವ ನಿರ್ಬಂಧ ಸಂವಿಧಾನ ಬಾಹಿರ ಹಾಗೂ ಸ್ವಾತಂತ್ರ್ಯ ವಿರೋಧಿ ಕಾರ್ಯ ಎಂದು ಜಸ್ಟೀಸ್ ಸಂತೋಷ್ ಹೆಗ್ಡೆ ಹೇಳಿದರು. ವಿದ್ಯಾರ್ಥಿಗಳೊಂದಿಗೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೇ ನ್ಯಾಯಾಲಯದಲ್ಲೂ ಮಾಧ್ಯಮಗಳಿಗೆ ಪ್ರವೇಶ ನೀಡಬೇಕು ಆಡಳಿತ ಪಾರದರ್ಶಕತೆಯಿಂದ ಕೂಡಿರುತ್ತದೆ ಎಂದರು.
ಭ್ರಷ್ಟಾಚಾರವನ್ನು ಯಾರಿಂದಲೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಆ ಪ್ರಯತ್ನ ನಡೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಈ ದೇಶದ ಭವಿಷ್ಯವೆಂದು ಕರೆಯಲ್ಪಡುವ ಯುವಜನತೆಯ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಯುವಜನತೆಗೆ ಪ್ರೇರಣೆ ನೀಡುವ ಸಲುವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಸಂತೋಷ್ ಹೆಗ್ಡೆ ಮಾಡುತ್ತಿದ್ದು, ಇದು ಅವರ 2011ನೇ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವಾಗಿದೆ.