ಮಲೇರಿಯಾ, ಡೆಂಗ್ಯೂ ನಿಯಂತ್ರಣ ಅಗತ್ಯ ಕ್ರಮ ವಹಿಸಿ-ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು ಮಲೇರಿಯಾ ಹೆಚ್ಚುತ್ತಿರುವ ಪುತ್ತೂರು, ಬೆಳ್ತಂಗಡಿ, ಸುಳ್ಳ, ಬಂಟ್ವಾಳ ಪ್ರದೇಶದಲ್ಲಿ ಸೂಕ್ತವಾದ ಕ್ರಮ ಕೈಗೊಂಡು ರೋಗವು ಹರಡದಂತೆ ಜಾಗೃತಿ ವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸೂಚಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಲೇರಿಯಾ / ಡೆಂಗ್ಯೂ ನಿಯಂತ್ರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದರು.
ಶಾಲಾ ಮತ್ತು ಅಂಗನವಾಡಿ ಕಟ್ಟಡ ಸುತ್ತಮುತ್ತ ಹಾಗೂ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಮೇಲ್ಭಾಗದಲ್ಲಿ ನೀರು ನಿಲ್ಲದಂತೆ ಅಧಿಕಾರಿಗಳು ಮಾಲೀಕರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಬೇಕೆಂದು ತಿಳಿಸಿದರು. ಅತಿ ಹೆಚ್ಚಾಗಿ ನೀರು ನಿಂತಿರುವ ಪ್ರದೇಶದಿಂದ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ. ಅದ್ದರಿಂದ ಅಂತಹ ಹೊಂಡದಲ್ಲಿ ಗಪ್ಪಿ ಮೀನು ಬಿಡುವ ವ್ಯವಸ್ಥೆಯನ್ನು ಮಾಡಬೇಕು. ಹಲವೆಡೆ ಗುಜರಿ ಅಂಗಡಿಗಳ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವ ಪ್ರಕರಣಗಳು ಕಂಡುಬರುತ್ತಿದ್ದು, ಅಂತಹವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ನಗರ ಪ್ರದೇಶದಲ್ಲಿ ಮಹಾನಗರಪಾಲಿಕೆಯು ಧ್ವನಿವರ್ಧಕವನ್ನು ಬಳಸಿ ಜನರಲ್ಲಿ ಮಲೇರಿಯಾ ರೋಗದ ವಿರುದ್ಧ ಜಾಗೃತಿಯನ್ನು ಮೂಡಿಸಬೇಕು. ಕೋವಿಡ್ ಕಾರಣದಿಂದ ಶಾಲೆ – ಕಾಲೇಜು ಪ್ರಾರಂಭವಾಗದೇ ಇರುವುದರಿಂದ ಆನ್‍ಲೈನ್ ತರಗತಿ ಪ್ರಾರಂಭವಾಗಿದ್ದು, ತರಗತಿ ಪ್ರಾರಂಭವಾಗುವ ಮೊದಲು 2 ನಿಮಿಷಗಳ ಕಾಲ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ವೀಡೀಯೋ ಪ್ರದರ್ಶಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ಥಳೀಯ ಸಂಸ್ಥೆಗಳು ಚರಂಡಿಗಳಲ್ಲಿ ನೀರು ನಿಲ್ಲದೇ ಹರಿದು ಹೋಗುವ ವ್ಯವಸ್ಥೆಯನ್ನು ಜೊತೆಗೆ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದೇ ಸೂಕ್ತವಾಗಿ ಕ್ರಮವಹಿಸಬೇಕು ಎಂದು ತಿಳಿಸಿದರು. ನಗರದಲ್ಲಿ ಆಕ್ರಮವಾಗಿ ಹಂದಿ ಸಾಗಾಣೆಯನ್ನು ಕಂಡುಬಂದಿದ್ದು ಅಂತಹ ಕೇಂದ್ರದ ವಿರುದ್ಧ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಡೆಂಗ್ಯೂ ಪ್ರಕರಣಗಳು ಕಂಡುಬಂದಲ್ಲಿ ಅದೇ ದಿನ ಇಲಾಖೆಗೆ ವರದಿ ನೀಡುವಂತೆ ಆಸ್ಪತ್ರೆ ಮತ್ತು ಲ್ಯಾಬ್‍ಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯಾರಿ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.