ಮಲೇರಿಯಾ ನಿಯಂತ್ರಣ- ಸೊಳ್ಳೆ ಪರದೆಗಳಿಗೆ ಉಚಿತ ಕೀಟನಾಶಕ ಲೇಪನ
ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣಗೊಳಿಸಲು ಹಲವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರು ರಾತ್ರಿ ಮಲಗುವಾಗ ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದರಿಂದ ಮಲೇರಿಯ ಹರಡದಂತೆ ರಕ್ಷಣೆ ಪಡೆಯಬಹುದು. ಸಾಮಾನ್ಯ ಸೊಳ್ಳೆ ಪರದೆಗಳನ್ನು ಕೀಟನಾಶಕಗಳಿಂದ ಉಪಚರಿಸುವುದರಿಂದ ಆರು ತಿಂಗಳವರೆಗೆ ಸೊಳ್ಳೆಗಳಿಂದ ಸಂಪೂರ್ಣ ರಕ್ಷಣೆ ಪಡೆಯಬಹುದು.
ಈ ಉದ್ದೇಶಕ್ಕಾಗಿ ಮಂಗಳೂರು ನಗರ ವ್ಯಾಪ್ತಿಯ ಎಕ್ಕೂರು , ಜೆಪ್ಪು , ಬಂದರ್ , ಲೇಡಿಹಿಲ್ , ಕೂಳೂರು ಕುಳಾಯಿ , ಶಕ್ತಿನಗರ , ಪಡೀಲ್ , ಕಸಬ ಬೇಂಗ್ರೆ ಹಾಗೂ ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾರ್ಚ್ ಒಂದರಿಂದ ಪ್ರತಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 1 ಗಂಟೆಯವರೆಗೆ ಸಾರ್ವಜನಿಕರಲ್ಲಿರುವ ಸೊಳ್ಳೆ ಪರದೆಗಳಿಗೆ ಉಚಿತವಾಗಿ ಕೀಟನಾಶಕ ಲೇಪನ ಮಾಡಿಕೊಡಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ದ.ಕ.ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.