Home Mangalorean News Kannada News ಮಲೇರಿಯಾ ನಿರ್ಲಕ್ಷ್ಯ:- ಕಟ್ಟಡ ನಿರ್ಮಾಣ ಲೈಸನ್ಸ್ ರದ್ದು-ಸಿ.ಇ.ಓ ಎಚ್ಚರಿಕೆ

ಮಲೇರಿಯಾ ನಿರ್ಲಕ್ಷ್ಯ:- ಕಟ್ಟಡ ನಿರ್ಮಾಣ ಲೈಸನ್ಸ್ ರದ್ದು-ಸಿ.ಇ.ಓ ಎಚ್ಚರಿಕೆ

Spread the love

ಮಲೇರಿಯಾ ನಿರ್ಲಕ್ಷ್ಯ:- ಕಟ್ಟಡ ನಿರ್ಮಾಣ ಲೈಸನ್ಸ್ ರದ್ದು-ಸಿ.ಇ.ಓ ಎಚ್ಚರಿಕೆ

ಮ0ಗಳೂರು: ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿದೆಡೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಂತು, ಮಲೇರಿಯಾ ಸೇರಿದಂತೆ ಸಾಂಕ್ರಮಿಕ ರೋಗಗಳಿಗೆ ಕಾರಣವಾಗುವ ಹಲವು ಪ್ರಕರಣಗಳು ಪತ್ತೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಕಟ್ಟಡ ಮಾಲೀಕರು ಕ್ರಮವಹಿಸದಿದ್ದರೆ, ಅಂತಹ ಕಟ್ಟಡಗಳ ನಿರ್ಮಾಣಕ್ಕೆ ನೀಡಲಾದ ಲೈಸನ್ಸನ್ನೇ ರದ್ದು ಮಾಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀ ವಿದ್ಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಇಂದು ತಮ್ಮ ಕಚೇರಿಯಲ್ಲಿ ಮಲೇರಿಯಾ-ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾಮಿಕರಲ್ಲಿ ಡೆಂಗ್ಯೂ, ಮಲೇರಿಯಾ ಹರಡುವ ಸಾಧ್ಯತೆ ಅಧಿಕ, ಸಂಬಂಧಿಸಿದ ಕಟ್ಟಡ ಮಾಲೀಕರು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಕಟ್ಟಡದ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯು ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನಿರಂತರ ಪರಿಶೀಲಿಸಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ, ಕಟ್ಟುನಿಟ್ಟಾಗಿ ವ್ಯವಹರಿಸಲು ಅವರು ತಾಕೀತು ಮಾಡಿದರು.

ಸಭೆಗೆ ಮಾಹಿತಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ನಗರಪಾಲಿಕೆ ವ್ಯಾಪ್ತಿಯಲ್ಲಿ ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ನಿರಂತರ ಕ್ರಮಕೈಗೊಳ್ಳಲಾಗುತ್ತಿದೆ. ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗುತ್ತಿದ್ದು, ನಿರ್ಲಕ್ಷ್ಯವಹಿಸಿದವರಿಗೆ ನೋಟೀಸ್ ನೀಡಲಾಗಿದೆ. ಅಲ್ಲದೆ ಈಗಾಗಲೇ 10 ಪ್ರಕರಣಗಳಲ್ಲಿ ಕಟ್ಟಡ ಮಾಲೀಕರಿಗೆ ತಲಾ ರೂ. 15000 ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಖಂದರ್ ಪಾಷಾ ಮಾತನಾಡಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ತೀವ್ರ ಪರಿಶ್ರಮಪಡುತ್ತಿದೆ ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅರುಣ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 297 ಡೆಂಗ್ಯೂ ಪ್ರಕರಣಗಳು ದೃಢಪಟಿವೆ ಮನೆಯ ಮಹಡಿಗಳ ಮೇಲೆ ಹಾಗೂ ಶೀಟೌಟ್ ಏರಿಯಾಗಳಲ್ಲಿಯೂ ನೀರು ನಿಂತರೆ ಸೊಳ್ಳೆಗಳು ಬೆಳೆಯಲು ಅವಕಾಶವಿದೆ. ಸಾರ್ವಜನಿಕರು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version