ಮಲ್ಪೆಯಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ – ಇಬ್ಬರು ಬೀಟ್ ಕಾನ್ಸ್ಟೇಬಲ್ ಅಮಾನತು
ಉಡುಪಿ: ಮಲ್ಪೆಯಲ್ಲಿ ಮಾ. 18 ರಂದು ದಲಿತ ಮಹಿಳೆಗೆ ಹಲ್ಲೆ ನಡೆಸಿದ ಕುರಿತು ಸರಿಯಾಗಿ ಮಾಹಿತಿ ಸಂಗ್ರಹಿಸದ ಮಲ್ಪೆ ಠಾಣೆಯ ಇಬ್ಬರು ಬೀಟ್ ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ.
ಅಮಾನತುಗೊಂಡವರು ಹೆಡ್ ಕಾನ್ಸ್ಟೇಬಲ್ ಸುರೇಶ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್
ಮಲ್ಪೆಯಲ್ಲಿ ಮೀನು ಕದ್ದಿದ್ದಾರೆ ಎಂಬ ಆರೋಪದ ಮೇಲೆ ವಿಜಯನಗರದ ಮಹಿಳೆಯೋರ್ವರ ಮೇಲೆ ಗುಂಪೊಂದು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದ್ದು, ಗುರುವಾರ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿದ ಸಂಬಂಧ ಇಬ್ಬರು ಆರೋಪಿಗಳಾದ ಲೀಲಾ ಮತ್ತು ಪಾರ್ವತಿ ಎಂಬುವರನ್ನು ಬಂಧಿಸಲಾಗಿರುತ್ತದೆ ಮತ್ತು ತನಿಖೆ ಮುಂದುವರೆದಿರುತ್ತದೆ.
ಈ ಪ್ರಕರಣದಲ್ಲಿ ಒಂದು ಮಹಿಳೆ ಮೇಲೆ ನಡೆದಿರುವ ಅಮಾನುಷ ಕೃತ್ಯವನ್ನು ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿರುತ್ತದೆ. ಸದರಿ ಪ್ರಕರಣಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಸಮಗ್ರ ವರದಿಯನ್ನು ಅತೀ ಶೀಘ್ರದಲ್ಲಿ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬುಧವಾರ ಮೀನು ಮಾರಾಟ ಮಾಡುವ ಶ್ರೀಮತಿ ಲಕ್ಷ್ಮೀ, ಶಿಲ್ಪ, ಆರಾಧನ ಬೋಟಿನ ಸುಂದರ್ ಎಂಬವರನ್ನು ಬಂಧಿಸಲಾಗಿತ್ತು. ಸದ್ಯ ಘಟನೆಗೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ ಐದಕ್ಕೆ ಏರಿದೆ