ಮಲ್ಪೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ: ಅಪರಾಧಿಗಳ ಮೇಲೆ ಕಠಿಣ ಕ್ರಮವಾಗಲಿ -ಗೀತಾ ವಾಗ್ಳೆ

Spread the love

ಮಲ್ಪೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ: ಅಪರಾಧಿಗಳ ಮೇಲೆ ಕಠಿಣ ಕ್ರಮವಾಗಲಿ -ಗೀತಾ ವಾಗ್ಳೆ

ಉಡುಪಿ: ಮಲ್ಪೆ ಬಂದರು ಪರಿಸರದಲ್ಲಿ ಮೀನು ಕದ್ದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಮರಕ್ಕೆ ಕಟ್ಟಿ ಹಾಕಿ ಆಕೆಯ ಮೇಲೆ ದೌರ್ಜನ್ಯವೆಸಗಿದ ಘಟನೆಯ ಕುರಿತು ಇಡೀ ಉಡುಪಿ ಜಿಲ್ಲೆಯ ಜನತೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.ಶಾಂತಿ, ಪ್ರೀತಿ ಸನ್ನಾಗರೀಕತೆಗೆ ಹೆಸರಾಗಿರುವ ಶ್ರೀಕೃಷ್ಣನ ನೆಲೆವೀಡು ಉಡುಪಿಯಲ್ಲಿ ಈ ರೀತಿಯ ಅನಾಗರಿಕ ಘಟನೆ ನಡೆದಿದೆ ಎಂದರೆ ನಂಬಲೂ ಕಷ್ಟವಾಗಿದೆ. ಹಿಂದಿನ ಕಾಲದಲ್ಲಿ ಉತ್ತರದ ರಾಜ್ಯಗಳಲ್ಲಿ ನಡೆಯುತ್ತಿದ್ದ ಇಂತಹ ಘಟನೆಗಳನ್ನು ಪತ್ರಿಕೆಗಳ ಮೂಲಕ ತಿಳಿದಾಗ ಹೀಗೂ ಉಂಟೇ ಎಂದು ಆಶ್ಚರ್ಯದಿಂದ ಹುಬ್ಬೇರಿಸುವಂತೆ ಆಗುತ್ತಿತ್ತು.ಆದರೆ ಇದೀಗ ನಮ್ಮದೇ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿರುವುದು ಉಡುಪಿಯ ಚರಿತ್ರೆಯಲ್ಲೊಂದು ಕಪ್ಪುಚುಕ್ಕೆ. ಇಂತಹ ಅಮಾನವೀಯ ಘಟನೆಗೆ ಕಾರಣರಾದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು ಕೇವಲ ಮೀನು ಕದ್ದರೆಂಬ ಕಾರಣಕ್ಕೆ ಆ ಮಹಿಳೆಯನ್ನು ಈ ರೀತಿ ಹಿಂಸಿಸಿರುವುದು ಖಂಡನೀಯ. ಇಂತಹ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮುಂದಿನ ದಿನಗಳಲ್ಲಿ ಈ ಅವಮಾನ ತಡೆಯಲಾಗದೇ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆಯಿದೆ. ಎಲ್ಲರೊಂದಿಗೆ ಸಹಜವಾಗಿ ಬದುಕು ಸಾಗಿಸುವುದು ದುಸ್ತರವಾಗಿದೆ. ಇದಕ್ಕೆ ಕಾರಣರಾಗಿರುವ ಆ ದುಷ್ಕರ್ಮಿಗಳು ಇನ್ನು ಮುಂದೆ ಸಾರ್ವಜನಿಕವಾಗಿ ತಿರುಗುವಂತಾಗಬಾರದು. ಸಮಾಜಕ್ಕೆ ಇಂತಹ ದುಷ್ಟಶಕ್ತಿಗಳು ಎಂದಿಗೂ ಮಾರಕವೇ. ಆದ್ದರಿಂದ ತಮ್ಮ ಈ ಘೋರ ಅಪರಾಧಕ್ಕೆ ಅವರು ಜೈಲಿನ ಸಲಾಕೆಗಳ ಹಿಂದೆ ಇರುವಂತಾಗಬೇಕು. ಯಾವುದೇ ಕಾರಣಕ್ಕೂ, ಯಾವುದೇ ಪ್ರಭಾವಕ್ಕೂ, ಯಾವುದೇ ಪ್ರಲೋಭನೆಗೂ ಒಳಗಾಗದೇ ಕಾನೂನಿನ ಚೌಕಟ್ಟಿನೊಳಗೆ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವಂತಾಗಬೇಕು, ತನ್ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಈ ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಉಡುಪಿಯ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಲು ಸೂಚಿಸಿರುವುದು ಶ್ಲಾಘನೀಯ ಎಂದು ಗೀತಾ ವಾಗ್ಳೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love
Subscribe
Notify of

0 Comments
Inline Feedbacks
View all comments