ಮಲ್ಪೆಯಲ್ಲಿ ಮಹಿಳೆ ಮೇಲೆ ಹಲ್ಲೆ: ಅನಾಗರಿಕ ಸಮಾಜಕ್ಕೆ ಹಿಡಿದ ಕೈಗನ್ನಡಿ – ಜಾನೆಟ್ ಬಾರ್ಬೋಜಾ
ಉಡುಪಿ: ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಅಮಾನುಷ ರೀತಿಯಲ್ಲಿ ಮರಕ್ಕೆ ಕಟ್ಟಿ ಥಳಿಸಿದ ಘಟನೆ ಹಾಗೂ ಅಲ್ಲಿ ನೆರೆದ ಜನರ ಮನೋಸ್ಥಿತಿಯು ಅನಾಗರಿಕ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಸಂಪನ್ಮೂಲ ಕ್ರೋಢಿಕರಣ ಅಧಿಕಾರಿ ಜಾನೆಟ್ ಬಾರ್ಬೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒರ್ವ ಮಹಿಳೆಯ ಮೇಲೆ ಹಲ್ಲೆ ನಡೆದಾಗ ಅಲ್ಲಿ ನೆರೆದ ಎಲ್ಲಾ ಜನರು ಡೊಂಬರಾಟವನ್ನು ವೀಕ್ಷಿಸಿದಂತಿದ್ದು ಯಾರೊಬ್ಬರೂ ಸಂತ್ರಸ್ತ ಮಹಿಳೆಯ ನೆರವಿಗೆ ಬಾರದೆ ಇದ್ದದ್ದು ಇನ್ನೊಂದು ನಾಚಿಕೆಗೇಡಿನ ವಿಷಯ .ಹಾಗೂ ಮಾನವೀಯ ಮೌಲ್ಯಗಳು ಎಷ್ಟೊಂದು ಅಧೋಗತಿಗೆ ಇಳಿದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದೇಶದಲ್ಲಿ ಆರಕ್ಷಕ ಠಾಣೆಗಳು, ಕಾನೂನು ವ್ಯವಸ್ಥೆಗಳನ್ನು ಬಳಸಿಕೊಳ್ಳುವುದರ ಬದಲು ಕಾನೂನನ್ನೇ ಕೈಗೆತ್ತಿಕೊಂಡರೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಕಾರಣವಾಗುತ್ತದೆ.
ಮಾರ್ಚ್ ತಿಂಗಳು ಮಹಿಳೆಯರಿಗಾಗಿ ಮೀಸಲಿಟ್ಟು ಎಲ್ಲೆಡೆ ಮಹಿಳಾ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಮಹಿಳೆಯೇ ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ್ದು ಸಮಾಜವೇ ತಲೆತಗ್ಗಿಸುವಂತಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಯುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡಿದ್ದು ಮಹಿಳೆಯನ್ನು ಸಂಪೂರ್ಣವಾಗಿ ಕುಗ್ಗಿಸಿ ಮಾನಸಿಕವಾಗಿ ಜರ್ಜರಿತಳನ್ನಾಗಿಸುವಲ್ಲಿ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ನಮ್ಮ ಉಡುಪಿ ಜಿಲ್ಲೆಯು ಸುಸಂಸ್ಕೃತ ಜಿಲ್ಲೆಯಲ್ಲ ಎನ್ನುವುದನ್ನು ಈ ಘಟನೆಯಿಂದ ತೋರ್ಪಡಿಸಿದೆ.
ಅಪರಾಧಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಲಿ,ಮುಂದೆ ಎಂದೂ ಇಂತಹ ಅಮಾನುಷ ,ಕೀಳು ಮಟ್ಟದ ಘಟನೆಗಳು ನಡೆಯದಿರಲು ಸಮಾಜವು ತನ್ನ ಜವಾಬ್ದಾರಿಯನ್ನು ಮೆರೆಯಲಿ. ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವುದರೊಂದಿಗೆ ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.