ಮಲ್ಪೆಯಲ್ಲಿ ಮಹಿಳೆ ಮೇಲೆ ಹಲ್ಲೆ: ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ – ದೀಪಕ್ ಕೋಟ್ಯಾನ್
ಉಡುಪಿ: ಮಲ್ಪೆಯಲ್ಲಿ ಮೀನು ಕದ್ದ ಆರೋಪ ಹೊರಿಸಿ ದಲಿತ ಮಹಿಳೆಯೋರ್ವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನುಷ ಘಟನೆಯು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ದೀಪಕ್ ಕೋಟ್ಯಾನ್ ಹೇಳಿದ್ದಾರೆ.
ಮಹಿಳೆಯು ಮೀನು ಕದ್ದ ಆರೋಪದಡಿಯಲ್ಲಿ ಮರಕ್ಕೆ ಕಟ್ಟಿ ಹೊಡೆಯುವ ವೀಡಿಯೋವೊಂದು ವೈರಲಾಗಿದ್ದು ಘಟನೆಗೆ ಸಂಬಂಧಿಸಿ ಜಿಲ್ಲೆಯ ಪೊಲೀಸರು ಕ್ಷೀಪ್ರ ಕಾರ್ಯಪ್ರವೃತ್ತರಾಗಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕಾಗಿ ಪೊಲೀಸರಿಗೆ ಅಭಿನಂದನೆಗಳು. ಘಟನೆಗೆ ಕಾರಣವಾದ ಇತರ ಆರೋಪಿಗಳ ವಿರುದ್ದವೂ ಕೂಡ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.
ಉಡುಪಿಯಂತಹ ಸುಶಿಕ್ಷಿತರ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿಯಾಗಿದ್ದು ಮಾನವೀಯತೆ ಮರೆತು ಮೃಗಗಳಂತೆ ಹಲ್ಲೆ ಮಾಡಿದ್ದಾರೆ. ಶಿಕ್ಷಿತರಾದ ನಮ್ಮ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ.
ದೇಶದ ಯಾವುದೇ ಮೂಲೆಯಲ್ಲಿ ಏನೇ ಘಟನೆಗಳಾದರೂ ತಕ್ಷಣ ಪತ್ರಿಕಾ ಹೇಳಿಕೆ ನೀಡುವ ಉಡುಪಿಯ ಶಾಸಕರು ತನ್ನದೇ ಕ್ಷೇತ್ರದಲ್ಲಿ ನಡೆದಿರುವ ಅಮಾನವೀಯ ಘಟನೆ ಬಗ್ಗೆ ಮೌನ ತಾಳಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಕ್ಷೇತ್ರದ ಪ್ರತಿಯೊಬ್ಬರ ರಕ್ಷಣೆ ಶಾಸಕರ ಹೊಣೆಯಾಗಿದ್ದು ಹೊಟ್ಟೆಪಾಡಿಗಾಗಿ ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ಕೆಲಸ ಮಾಡುವ ಒರ್ವ ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ಶಾಸಕರ ನಿರ್ಲಕ್ಷ್ಯ ಸರಿಯಲ್ಲ. ಮಲ್ಪೆಯಲ್ಲಿ ಮಹಿಳೆಗೆ ಹಲ್ಲೆ ನಡೆಸಿದ ಎಲ್ಲ ತಪ್ಪಿಸ್ಥರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರಗಿಸಿ, ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ದೀಪಕ್ ಕೋಟ್ಯಾನ್ ಆಗ್ರಹಿಸಿದ್ದಾರೆ.