ಮಲ್ಪೆ ಘಟನೆ: ಮಾ.22 ರಂದು ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ
- ಮಾ.18ರಂದು ಘಟನೆಯ ಕುರಿತು ಮಲ್ಪೆ ಮೀನುಗಾರರ ಸಂಘದಿಂದ ಸ್ಪಷ್ಟನೆ
ಉಡುಪಿ: ಮಲ್ಪೆ ಬಂದರು ಪ್ರದೇಶದಲ್ಲಿ ಮಾ.18ರಂದು ನಡೆದ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಆದ ಬೆಳವಣಿಗೆಯಿಂದ ಮೀನುಗಾರರು ಹಾಗೂ ಸಮುದಾಯಕ್ಕೆ ಕಳಂಕ ಬರುವಂತಾಗಿದೆ. ಈ ಬಗ್ಗೆ ಮೀನುಗಾರಿಕಾ ಬಂದರಿನಲ್ಲಿ ಸ್ವಇಚ್ಛೆಯಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಮಾ.22 ರಂದು ಬೆಳಗ್ಗೆ ಸಮಸ್ತ ಮೀನುಗಾರರಿಂದ ಪ್ರತಿಭಟನೆ ನಡೆಯಲಿದೆ. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಗುವುದು ಎಂದು ಮಲ್ಪೆ ಮೀನುಗಾರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಅವರು ಮಲ್ಪೆ ಬಂದರಿನಲ್ಲಿ ಪ್ರತಿದಿನ ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆಗಾಗಿ ಜಾತಿ, ಮತ, ಪಂಗಡ, ಭೇದವಿಲ್ಲದೆ ಹೊರರಾಜ್ಯ ಮತ್ತು ಹೊರ ಜಿಲ್ಲೆಯ ಜನರು ಮೀನುಗಾರಿಕೆಯಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಮತ್ಸ್ಯ ಕ್ಷಾಮದಿಂದ ಮೀನುಗಾರಿಕೆ ಕುಂಠಿತಗೊಂಡು ಬೋಟಿನವರು ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಈ ಮಧ್ಯೆ ಕಳೆದ ಹಲವಾರು ಸಮಯದಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಸಲಕರಣೆಗಳಾದ ಬೋಟಿನ ಪ್ಯಾನ್, ಬ್ಯಾಟರಿ, ಜಿಪಿಎಸ್ ವೈಯರ್ ಲೆಸ್, ಫಿಶ್ ಪೈಂಡರ್, ಬಲೆ ಸಾಮಾಗ್ರಿಗಳು ಮತ್ತು ಮೀನುಗಳನ್ನು ಕಳ್ಳತನ ಮಾಡಿದ ಬಗ್ಗೆ ಹಲವಾರು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಕ್ಕಿರುವುದಿಲ್ಲ ಆದರೆ ಬಂದರು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡವರು ಷರತ್ತು ಪ್ರಕಾರ 30 ಕಾವಲು ಸಿಬಂದಿಗಳನ್ನು ಮತ್ತು ಎಲ್ಲಾ ಕಡೆ ಸಿಸಿ ಕ್ಯಾಮರ ಅಳವಡಿಸುವ ನಿಯಮವಿದ್ದರೂ ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮತ್ತು ಕರಾವಳಿ ಪೇ ಪಾರ್ಕಿಂಗ್ ನವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಇದರಿಂದ ನೊಂದಿರುವ ಮೀನುಗಾರರು ಇಲಾಖೆ ಮತ್ತು ಪಾರ್ಕಿಂಗ್ ನ ಮಾಲಕರ ಬಗ್ಗೆ ಆಕ್ರೋಶಿತರಾಗುವುದು ಸಹಜ.
ಮಾರ್ಚ್ 18ರಂದು ಆರಾಧನ ಬೋಟಿನ ಮೀನು ಖಾಲಿ ಮಾಡುವ ಸಂದರ್ಭದಲ್ಲಿ ಮೀನು ಹೊರುವ ಮಹಿಳೆಯು ಒಂದು ಬುಟ್ಟಿ ಸಿಗಡಿ ಮೀನು ಸುಮಾರು 20 ಕೆಜಿ) ಸುಮಾರು 10000 ರೂ ಬೆಲೆಬಾಳುವ ಮೀನನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಸೇರಿದ ಜನರು ಆಕ್ರೋಶಿತಗೊಂಡು ಸದ್ರಿ ಘಟನೆ ನಡೆದಿರುತ್ತದೆ. ಈ ಘಟನೆಯೂ ಉದ್ದೇಶಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ಆದ ಘಟನೆಯಾಗಿದ್ದು ನಂತರ ಅವರನ್ನು ಸಮಾಧಾನಪಡಿಸಿ ಕಳುಹಿಸಿರುತ್ತಾರೆ.
ಮಲ್ಪೆಯ ಸಂಘ ಸಂಸ್ಥೆಗಳು ಮಲ್ಪೆಯಲ್ಲಿ ದಿನಾಲೂ ಸಾವಿರಾರು ಜನರು ಸೇರುವ ಈ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಅದನ್ನು ನ್ಯಾಯ ಪಂಚಾಯತಿ ಮುಖಾಂತರ ಪರಿಹಾರ ಮಾಡಿಕೊಂಡು ಬಂದಿರುತ್ತೇವೆ. ಈ ಘಟನೆ ನಮ್ಮ ಗಮನಕ್ಕೆ ಅಂದು ಸಂಜೆ ಬಂದ ಕೂಡಲೇ ಮಲ್ಪೆಯ ಠಾಣಾಧಿಕಾರಿಯ ಗಮನಕ್ಕೆ ತಂದು 2 ಪಾರ್ಟಿಯವರನ್ನು ಮತ್ತು ಮೀನುಗಾರ ಮುಖಂಡರ ಸಮಕ್ಷಮದಲ್ಲಿ ವಿಚಾರಿಸಿದಾಗ 2 ಪಾರ್ಟಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಠಾಣಾಧಿಕಾರಿಯವರು 2 ಪಾರ್ಟಿಯವರಿಂದ ತಪ್ಪೊಪ್ಪಿಗೆ ಹಿಂಬರಹವನ್ನು ಬರೆಸಿಕೊಂಡು ಇದನ್ನು ಇತ್ಯರ್ಥಗೊಳಿಸಿರುತ್ತಾರೆ.
ಮಾರ್ಚ್ 19 ರಂದು ಮದ್ಯಾಹ್ನ 12.30 ರ ವೇಳೆ ಬೋಟಿನ ಮಾಲಕರನ್ನು ನಿನ್ನೆ ನಡೆದ ರಾಜಿ ಪಂಚಾಯತಿಗೆ ಸಹಿ ಹಾಕಲೆಂದು ಕರೆಸಿ ಸತ್ಯಾಸತ್ಯೆತೆಯನ್ನು ಅರಿಯದೆ ಬಂಧಿಸಿರುತ್ತಾರೆ. ಈ ಬಗ್ಗೆ ವಲಯಾಧಿಕಾರಿಯನ್ನು ವಿಚಾರಿಸಿದಾಗ ಮೊದಲ ದಿನ ಠಾಣಾಧಿಕಾರಿಯವರು ಮಾಡಿರುವ ರಾಜಿ ಪಂಚಾಯತಿಗೆ ಮಾನ್ಯತೆಯನ್ನು ನೀಡದೆ 4 ಜನರ ಮೇಲೆ ಸೆಕ್ಷನ್ ಹಾಕಿ ಜಾಮೀನುರಹಿತ ಎಫ್ ಐ ಆರ್ ಮಾಡಿ ಬಂಧಿಸಿರುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಒಂದು ಮುಖವನ್ನು ಮಾತ್ರ ತೋರಿಸಿ ನಂತರ ಆದ ಬೆಳವಣಿಗೆಯನ್ನು ತೋರಿಸಿದರೆ ನಮ್ಮ ಮೀನುಗಾರರ ಮೇಲೆ ಕಳಂಕ ಬರುವಂತೆ ಬಿಂಬಿಸಿರುತ್ತಾರೆ. ಅಲ್ಲದೆ ಇದು ಮೇಲ್ನೋಟಕ್ಕೆ ಯಾರದೋ ಒತ್ತಡಕ್ಕೆ ಬಡ ಮೀನುಗಾರರನ್ನು ಬಂಧನ ಮಾಡಿರುವಂತಿದೆ.
ಮಲ್ಪೆ ಮೀನುಗಾರರ ಸಂಘದಿಂದ ಈ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಆದರೆ ಸ್ಥಳೀಯವಾಗಿ ನಮ್ಮ ಮೀನುಗಾರರ ಸಂಘಟನೆಗಳು ಎಲ್ಲರಿಗೂ ಸಮಾನವಾಗಿ ಸೌಹಾರ್ಧಯುತವಾಗಿ ನ್ಯಾಯ ಕೊಡುವಲ್ಲಿ ಬದ್ಧವಾಗಿರುತ್ತೆ ಅಲ್ಲದೆ ನಮ್ಮ ಮೀನುಗಾರರ ಸಮುದಾಯಕ್ಕೆ ಕಳಂಕ ಬಂದಿರುತ್ತದೆ. ಈ ಬಗ್ಗೆ ಮಾರ್ಚ್ 22 ರಂದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸ್ವ ಇಚ್ಛೆಯಿಂದ ಮೀನುಗಾರಿಕೆ ಸ್ಥಗಿತಗೊಳಿಸಿ ಬೆಳಿಗ್ಗೆ 9 ಗಂಟೆಗೆ ಸಮಸ್ತ ಮೀನುಗಾರರ ಪ್ರತಿಭಟನೆ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.