ಮಲ್ಪೆ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಮಾತು – ಮಂಜು ಕೊಳ ವಿರುದ್ದ ಪ್ರಕರಣ ದಾಖಲು

Spread the love

ಮಲ್ಪೆ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಮಾತು – ಮಂಜು ಕೊಳ ವಿರುದ್ದ ಪ್ರಕರಣ ದಾಖಲು

ಮಲ್ಪೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮೀನುಗಾರ ಮುಖಂಡ ಮಂಜು ಕೊಳ ವಿರುದ್ದ ಮಲ್ಪೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ಹೇಗೆ ನಿಭಾಯಿಸಬೇಕು, ಹಾಗೂ ಎಲ್ಲಾ ಸಮಾಜಗಳನ್ನು ಒಳಗೊಂಡು ಮೀನುಗಾರರಿಗೆ ಬಂದರಿನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಮಲ್ಪೆ ಮೀನುಗಾರರ ಸಂಘ (ರಿ) ಹಾಗೂ ಇನ್ನಿತರರ ಪ್ರಮುಖ ಮೀನುಗಾರಿಕಾ ಸಂಘಗಳು ದಿನಾಂಕ 22.03.2025ರಂದು ಪ್ರತಿಭಟನಾ ಸಭೆಯನ್ನು ಮಲ್ಪೆಯ ಬಂದರು ಪ್ರದೇಶದಲ್ಲಿ ಹಮ್ಮಿಕೊಂಡಿರುತ್ತಾರೆ. ಈ ಸಭೆಯಲ್ಲಿ ಹಲವಾರು ಗಣ್ಯರು ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುತ್ತಾರೆ.

ಆ ಸಮಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಂಜು ಕೊಳ ಎಂಬುವವರು ತುಳು ಭಾಷೆಯಲ್ಲಿ ಮಾತನಾಡುತ್ತಾ, ಗಂಗೊಳ್ಳಿಯ ಒಂದು ಘಟನೆ ನೆನಪಿಟ್ಟುಕೊಳ್ಳಿ ಇದೇ SP ಗೆ ಹೇಳುತ್ತೇನೆ. ಗಂಗೊಳ್ಳಿಯ ಒಂದು ಘಟನೆ ನೆನಪಿಟ್ಟುಕೊಳ್ಳಿ ಒಬ್ಬ ಮೀನುಗಾರನನ್ನು ಒಳಗೆ ಹಾಕಿದರು ಅದಕ್ಕೆ 10,000 ಜನ ಮೀನುಗಾರರು ಒಟ್ಟಾದಾಗ ಇದೇ ಎಸ್ಪಿ ಹೋಗಿ ಅವರ ಕಾಲು ಹಿಡಿದು ವಾಪಾಸು ಕರೆದುಕೊಂಡು ಬಂದರು. ಆ ಘಟನೆ ಮತ್ತೆ ಆಗಲು ಬಿಡಬೇಡಿ. ನೆನಪಿಟ್ಟುಕೊಳ್ಳಿ 25 ತಾರೀಖಿನೊಳಗೆ ರಘುಪತಿ ಭಟ್ ರವರು ಹೇಳಿದರು ಆ ಸೆಕ್ಷನ್ ನ ಚೇಂಜ್ ಮಾಡದೆ ಇದ್ದರೆ ಗಂಗೊಳ್ಳಿಯ ಕಥೆನೆ ಇಲ್ಲಿ ಆಗುತ್ತೆ. ಡೌಟೆ ಇಲ್ಲ. ನಾವು ಕರಾವಳಿ ಭಾಗದ ಜನ ಮುಂದೆ ನೋಡಿ ಗಂಗೊಳ್ಳಿಯಿಂದ ಮಂಗಳೂರಿನ ವರೆಗೆ ನಾವು ಜನ ಒಟ್ಟು ಮಾಡಿ ಹೈವೇಲಿ ನಿಲ್ಸಿಲ್ಲ ಅಂದ್ರೆ ನಾವು ಮೀನುಗಾರರೆ ಅಲ್ಲ . ದಯಮಾಡಿ ಒಳಗೆ ಹಾಕಿದ 4 ಹೆಂಗಸರನ್ನು ಬಿಡಬೇಕು ಎಂದು ವೇದಿಕೆ ಮೇಲೆ ಭಾಷಣ ಮಾಡಿದ ಮಂಜು ಕೊಳರವರು ಭಾಷಣ ಮಾಡುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟುವ ಮಾತನಾಡುತ್ತಾ ಸಾರ್ವಜನಿಕರಿಂದ ಇಂತಹ ಅಪರಾಧ ಮಾಡಿಸಲು ದುಷ್ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ, ಇಷ್ಟಪೂರ್ವಕವಾಗಿ ಭಾಷಣ ಮಾಡಿ ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ಗೊತ್ತಿದ್ದೂ ಅಲ್ಲಿದ್ದವರನ್ನು ಪ್ರಚೋದಿಸುತ್ತಾ ಉದ್ರೇಕ ಭಾಷಣ ಮಾಡಿರುತ್ತಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2025 ಕಲಂ. ಕಲಂ 57, 191(1), 192. BNS ರಂತೆ ಸುಮೊಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments