Spread the love
ಮಲ್ಪೆ ಬಂದರು ಸಮಗ್ರ ನಿರ್ವಹಣೆಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೂಚನೆ
ಮಲ್ಪೆ ಬಂದರು ಪ್ರದೇಶದಲ್ಲಿ ಸ್ವಚ್ಛತೆ ಸೇರಿದಂತೆ ಮತ್ತಿತರ ನಿರ್ವಹಣಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಡೆಸಿ ಮೀನುಗಾರಿಕಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ .ಕೆ ರವರು ಸೂಚನೆ ನೀಡಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಬಂದರು ಸಮಗ್ರ ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಲ್ಪೆ ಬಂದರು ರಾಜ್ಯದಲ್ಲಿಯೇ ಅತಿ ದೊಡ್ಡ ಮೀನುಗಾರಿಕಾ ಬಂದರು ಆಗಿದ್ದು , ಮೀನುಗಾರಿಕಾ ಚಟುವಟಿಕೆಗಳನ್ನು ಮೀನುಗಾರರು ಕೈಗೊಳ್ಳಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲ್ಪೆ ಬಂದರಿನಲ್ಲಿ ಮೀನುಗಳ ಕಳ್ಳತನ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ .ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಸಾಧ್ಯವಾದರೆ ಮಲ್ಪೆ ಬಂದರಿನಲ್ಲಿ ಪೊಲೀಸ್ ಔಟ್ ಪೋಸ್ಟನ್ನು ಸ್ಥಾಪಿಸಲು ಸ್ಥಳಾವಕಾಶ ಮಾಡಿ ಕೊಡಬೇಕೆಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಬಂದರಿಗೆ ಮೂರು ದ್ವಾರಗಳಿದ್ದು ಸಾರ್ವಜನಿಕರನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿರುತ್ತದೆ ಆದ್ದರಿಂದ ಮೀನುಗಾರಿಕೆ ಬಂದರಿಗೆ ಬರುವವರನ್ನು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿ ಒಳಗೆ ಬಿಡಬೇಕು, ಈ ಕಾರ್ಯ ಮಾಡಲು ಗುತ್ತಿಗೆದಾರರು ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಸೂಚನೆ ನೀಡಿದರು.
ಮಲ್ಪೆ ಬಂದರಿನ ಗುತ್ತಿಗೆದಾರರು ಬಂದರಿನಲ್ಲಿ ನಿಯೋಜಿಸಿದ ಸಿಬ್ಬಂದಿಗಳಿಗೆ ನಿಯಮಾನುಸಾರ ವೇತನ ಮತ್ತು ಅದಕ್ಕೆ ಅನುಗುಣವಾಗಿ ಪಿ.ಎಫ್ ಮತ್ತು ಇ.ಎಸ್.ಐ ಪಾವತಿಸಲು ಹಾಗೂ ಬಯೋಮೇಟ್ರಿಕ್ ಮುಖಾಂತರ ಹಾಜರಾತಿಯನ್ನು ಖಚಿತ ಪಡಿಸಲು ತಿಳಿಸಿದರು.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯವರು ಕೂಡಲೇ ಮಲ್ಪೆ ಬಂದರಿನಲ್ಲಿ ಅಗತ್ಯವಾದ ಮೂಲಭೂತ ಸೌರ್ಕಗಳಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ತೆ ಹಾಗೂ ಸಿ.ಸಿ. ಟಿವಿ ಗಳನ್ನು ಆದ್ಯತೆ ಮೇರೆಗೆ ಅನುಷ್ಟಾನಗೊಳಿಸ ಬೇಕೆಂದರು.
ಮಲ್ಪೆ ಮೀನುಗಾರಿಕೆ ಬಂದರಿನ ಗುತ್ತಿಗೆದಾರರಿಗೆ ಬಂದರಿನ ಸಮಗ್ರ ನಿರ್ವಹಣೆ ಮತ್ತು ಸುಚಿತ್ವವನ್ನು ಕಾಪಾಡಲು ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಿಸದಿದ್ದಲ್ಲಿ, ಗುತ್ತಿಗೆಯನ್ನು ರದ್ದು ಪಡಿಸಿ ಗುತ್ತಿಗೆದಾರರನ್ನು ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ .ಕೆ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಕದ್ರಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.
Spread the love