ಮಲ್ಪೆ ಮೀನುಗಾರಿಕಾ ಬೋಟ್ ನಾಪತ್ತೆ ; ಸಂಸದ ಶಾಸಕರಿಂದ ರಾಜನಾಥ್ ಸಿಂಗ್ ಭೇಟಿ
ಉಡುಪಿ: ಉಡುಪಿಯ ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ “ಸುವರ್ಣ ತ್ರಿಭುಜ” ಎಂಬ ಬೋಟ್ ನಾಪತ್ತೆಯಾಗಿದ್ದು ಇದರ ಪತ್ತೆ ಹಚ್ಚುವ ಕಾರ್ಯಕ್ಕಾಗಿ ಹಾಗೂ ಮತ್ತಷ್ಟು ಸಹಕಾರಕ್ಕಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇವರನ್ನು ಭೇಟಿ ಮಾಡಲಾಯಿತು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಇವರ ನೇತೃತ್ವದಲ್ಲಿ ನಡೆದಿದ್ದ ಈ ಭೇಟಿಯಲ್ಲಿ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು, ಉಡುಪಿ ಶಾಸಕರಾದ ಕೆ ರಘುಪತಿ ಭಟ್, ಕಾಪು ಶಾಸಕರಾದ ಲಾಲಾಜಿ ಮೆಂಡನ್ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ವಿನಯ್ ಕರ್ಕೇರ, ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಬೆಂಗಳೂರಿನ ಶಿವಲಿಂಗಪ್ಪ, ಮೊಗವೀರ ಸಂಘಟನೆಯ ಮುಂದಾಳು ರಾಘವೇಂದ್ರ ಹಾಗೂ ಇತರ ಮೊಗವೀರ ಮುಖಂಡರು ಭೇಟಿಯಾಗಿ ಸಚಿವರನ್ನು ಆಗ್ರಹಿಸಿದರು.
ನಿಯೋಗದ ಮನವಿಗೆ ಸ್ಪಂಧಿಸಿದ ಗೃಹ ಸಚಿವರಾದ ರಾಜನಾಥ್ ಸಿಂಗ್ ಕೂಡಲೇ ರಕ್ಷಣಾ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರದಿಂದಲೇ ಎಲ್ಲಾ ರೀತಿಯ ತನಿಖೆ ನಡೆಸಿ ಕಾಣೆಯಾದ ಬೋಟ್ ಮತ್ತು ಮೀನುಗಾರರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. ಮಹಾರಾಷ್ಟ್ರ, ಗೋವಾ ಗಡಿ ಮತ್ತು ಗುಜರಾತ್ ಗಡಿಯಲ್ಲೂ ಮತ್ತು ಸಮುದ್ರ ಸೇರಿದಂತೆ ಸಂಶಯಾಸ್ಪದವಾಗಿರುವ ಪ್ರತಿ ಕಡೆಗಳಲ್ಲೂ ಪತ್ತೆ ಹಚ್ಚುವ ಕಾರ್ಯ ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.