ಉಡುಪಿ: ಮಳೆಗಾಗಿ ಪ್ರಾರ್ಥಿಸಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಶುಕ್ರವಾರ ಮಸೀದಿ, ಮಂದಿರ ಹಾಗೂ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ಮೊದಲು ಉಡುಪಿ ಜಾಮೀಯಾ ಮಸೀದಿಯಲ್ಲಿ ಮೌಲಾನ ರಶೀದ್ ಅಹಮದ್ ನದ್ವೀ ನೇತೃತ್ವದಲ್ಲಿ ಜರುಗಿದ ಪ್ರಾರ್ಥನಾ ವಿಧಯಲ್ಲಿ ಭಾಗವಹಿಸಿದ ಶಾಸಕರು ಬಳಿಕ ಉಡುಪಿಯ ಅನಂತೇಶ್ವರ, ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು. ಬಳಿಕ ಸ್ವಾಮೀಜಿಯವರು ಕೃಷ್ಣ ಮಠದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸದರು.
ಬಳಿಕ ಉಡುಪಿಯ ಶೋಕಮಾತಾ ಇಗರ್ಜಿಗೆ ತೆರಳಿದ ಶಾಸಕ ಪ್ರಮೋದ್ ಮಧ್ವರಾಜ್ ಚರ್ಚಿನಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಶೋಕ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ ಫ್ರೆಡ್ ಮಸ್ಕರೇನ್ಹಸ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯನ್ನು ನೇರವೇರಿಸಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಇಂದು ಮೂರು ವರ್ಷಗಳು ಮುಗಿದಿದ್ದು, ನನ್ನ ಶಾಸಕತ್ವದ ಅವಧಿಯ ಮೂರು ವರ್ಷಗಳಲ್ಲಿ ಎಂದೂ ಕೂಡ ಉಡುಪಿಯಲ್ಲಿ ನೀರಿನ ಸಮಸ್ಯೆಯನ್ನು ಅನುಭವಿಸಿಲ್ಲ ಅಲ್ಲದೆ ಇಂದು ಕೂಡ ನಗರಸಭೆ ಸಮರ್ಪಕ ನೀರನ್ನು ಪೋರೈಸಿದೆ. ಮುಂದೆಯೂ ಕೂಡ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನಾಲಯಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದು ಅದರಂತೆ ಚರ್ಚು, ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ. ದೇವರು ನಮ್ಮ ಪ್ರಾರ್ಥನೆಯನ್ನು ಆಲಿಸಿ ಯಥೇಚ್ಚವಾದ ಮಳೆಯನ್ನು ಕರುಣಿಸಲಿದ್ದಾನೆ ಎಂಬ ನಂಬಿಕೆ ನಮ್ಮದು ಎಂದರು.
ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾಕುಮಾರಿ, ಮಾಜಿ ಅಧ್ಯಕ್ಷ ಯುವರಾಜ್, ಕಾಂಗ್ರೆಸ್ ನಾಯಕರುಗಳಾದ ಅಮೃತ್ ಶೆಣೈ, ಯತೀಶ್ ಕರ್ಕೇರಾ, ಪ್ರಶಾಂತ್ ಪೂಜಾರಿ, ಸತೀಶ್ ಅಮೀನ್ ಪಡುಕೆರೆ, ರಮೇಶ್ ಕಾಂಚನ್, ಸೆಲಿನಾ ಕರ್ಕಡ, ಜನಾರ್ಧನ ಭಂಡಾರ್ಕರ್ ಇನ್ನಿತರರು ಉಪಸ್ಥಿತರಿದ್ದರು.